ಪಾಟ್ನಾ: ನೆರೆಯ ರಾಜ್ಯಗಳಲ್ಲಾಗುತ್ತಿರುವ ಭಾರೀ ಮಳೆಯಿಂದಾಗಿ ಬಿಹಾರ ರಾಜ್ಯದ ಕೆಲವು ಜಿಲ್ಲೆಗಳ ಸ್ಥಿತಿ ಹದಗೆಟ್ಟಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶುಕ್ರವಾರ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ಪ್ರವಾಹದ ಅವಲೋಕನ ನಡೆಸಿದ ಸಿಎಂ ಮಾತನಾಡಿ, "ಮೊಕಾಮಾದಲ್ಲಿ ಗಂಗಾ ನದಿಯಲ್ಲಿ ನಿರಂತರವಾದ ನೀರಿನ ಮಟ್ಟದ ಏರಿಕೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ" ಎಂದು ತಿಳಿಸಿದರು.
ಜುಲೈನಲ್ಲಿಯೂ ಪ್ರವಾಹ ಪರಿಸ್ಥಿತಿ ಉಂಟಾಗಿದ್ದಾಗ ಸಿಎಂ ವೈಮಾನಿಕ ಸಮೀಕ್ಷೆ ನಡೆಸಿದ್ದರು. ಬಾರ್ಹ್ ಉಪವಿಭಾಗದ ಬ್ಲಾಕ್‌ನ ಬರ್ಹ್‌ಪುರ, ಕನ್ಹಯ್‌ಪುರ, ಹತಿದಾ, ಮರಂಚಿ, ಕಸಹಾ ಡಿಯಾರಾ ಸೇರಿದಂತೆ ಹಲವು ಗ್ರಾಮಗಳಿಗೆ ಗಂಗಾನದಿ ನೀರು ನುಗ್ಗಿದ್ದರಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಗ್ರಾಮಕ್ಕೆ ಗಂಗಾ ನದಿ ನೀರು ಸೇರುತ್ತಿರುವ ಬಗ್ಗೆ ಮಾಹಿತಿ ಲಭಿಸಿದ ಕೂಡಲೇ ಬಾರ್ಹ್‌ಪುರ, ಕಸಹಾ ಡಿಯಾರಾ ಗ್ರಾಮದಲ್ಲಿ ಜಲಸಂಪನ್ಮೂಲ ಇಲಾಖೆಯ ತಂಡವು ಹಾನಿಗೊಳಗಾದ ಪ್ರದೇಶಗಳ ಪರಿಶೀಲನೆ ನಡೆಸಿತು. ಗಂಗಾ ನದಿಯಲ್ಲಿ ಆಗುತ್ತಿರುವ ಕೊರೆತ ತಡೆಯಲು ಇಲಾಖೆ ಅಧಿಕಾರಿಗಳು ತೀವ್ರ ಪ್ರಯತ್ನ ನಡೆಸಿದ್ದಾರೆ.
ಬೆಳೆ ಮುಳುಗಡೆ, ಜಾನುವಾರು ಮೇವಿಗೆ ಪರದಾಟ: ಹಲವು ಎಕರೆಗಳಲ್ಲಿ ನಾಟಿ ಮಾಡಿದ್ದ ಮೆಕ್ಕೆಜೋಳದ ಬೆಳೆಗಳು ಜಲಾವೃತಗೊಂಡಿದ್ದು, ಇದರಿಂದ ರೈತರು ಅಪಾರ ನಷ್ಟ ಅನುಭವಿಸುವಂತಾಗಿದೆ. ಕಸಹಾ ಡಯಾರಾ ಮತ್ತು ಜಂಜಿರಾ ಡಯಾರಾದಲ್ಲಿ ಪ್ರವಾಹದಿಂದಾಗಿ ಪರಿಸ್ಥಿತಿ ಹದಗೆಟ್ಟಿದ್ದು, ಇಲಾಖೆ ಅಧಿಕಾರಿಗಳು ನಿರಂತರವಾಗಿ ಪರಿಸ್ಥಿತಿ ಮೇಲೆ ನಿಗಾ ಇಟ್ಟಿದ್ದಾರೆ.
ರಸ್ತೆಬದಿ ರಾತ್ರಿ ಆಶ್ರಯ: ಮೊಕಾಮಾ ಪೂರ್ವ ಜಿಲ್ಲಾ ಕೌನ್ಸಿಲರ್ ಕುಮಾರ್ ನವನೀತ್ ಹಿಮಾಂಶು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಪ್ಯಾಕೇಜ್‌ಗೆ ವಿತರಿಸಿದರು. ಗ್ರಾಮದ ಜನರು ಗುಳೆ ಹೋಗಿದ್ದು, ರಸ್ತೆಬದಿಯಲ್ಲಿ ರಾತ್ರಿ ಆಶ್ರಯ ಪಡೆದಿದ್ದು, ಉಪವಿಭಾಗೀಯ ಆಡಳಿತಕ್ಕೆ ನೆರವು ನೀಡುವಂತೆ ಮನವಿ ಮಾಡಿದ್ದಾರೆ.
ಮೊಕಾಮಾ ಜಿಲ್ಲಾ ಕೌನ್ಸಿಲರ್, ಕುಮಾರ್ ನವನೀತ್ ಮಾತನಾಡಿ, "ಮೊಕಾಮಾ ಪಶ್ಚಿಮದ ಹಲವು ಗ್ರಾಮಗಳಿಂದ ಜನರು ಜಾನುವಾರುಗಳ ಸಮೇತ ವಲಸೆ ಹೋಗಿದ್ದಾರೆ. ಸರ್ಕಾರ ಎಲ್ಲರಿಗೂ ಆಶ್ರಯ ವ್ಯವಸ್ಥೆ ಮಾಡಬೇಕು. ಪ್ರಾಣಿಗಳ ಆಹಾರದ ಬಗ್ಗೆ ಚಿಂತೆಯಾಗಿದೆ." ಎಂದು ಹೇಳಿದರು.
ಮಹಿಳೆ ಸಾವು: ಡಣಾಪುರ ಡಯಾರಾದಲ್ಲಿ ಮಹಿಳೆಯೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೂರು ದಿನಗಳ ಹಿಂದೆ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ. ಗಿರಣಿಯಿಂದ ಹಿಟ್ಟು ತರುತ್ತಿದ್ದಾಗ 44 ವರ್ಷದ ರಾಜಮತಿ ಕುನ್ವರ್ ಎಂಬ ಮಹಿಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗೂ ನೀರು: ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಳದಿಂದ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ರಾಷ್ಟ್ರೀಯ ಹೆದ್ದಾರಿಗಳೂ ಜಲಾವೃತಗೊಂಡಿವೆ. ಪ್ರವಾಹ ಸಂತ್ರಸ್ತರಿಗೆ ಎಲ್ಲ ರೀತಿಯ ನೆರವು ನೀಡುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಡಯಾರಾ ಪ್ರದೇಶದ ಹಲವು ಶಾಲೆಗಳನ್ನು ಜಿಲ್ಲಾಡಳಿತ ಮುಚ್ಚಿದೆ.
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಗಂಗಾ ನದಿ: ಶುಕ್ರವಾರ ಬೆಳಗ್ಗೆ ಪಾಟ್ನಾದ ಮನೇರ್‌ನಲ್ಲಿ ಗಂಗಾನದಿಯ ನೀರಿನ ಮಟ್ಟ 53.29 ಮೀಟರ್‌ಗೆ ತಲುಪಿದ್ದು, ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪಾಟ್ನಾದ ದಿಘಾ ಘಾಟ್‌ನಲ್ಲಿ ಅಪಾಯದ ಮಟ್ಟ ಮೀರಿ 51.5 ಮೀಟರ್ ಹರಿಯುತ್ತಿದೆ. ಪಾಟ್ನಾದ ಗಾಂಧಿ ಘಾಟ್‌ನಲ್ಲಿ ಅಪಾಯದ ಮಟ್ಟ ಮೀರಿ 50.28 ಮೀಟರ್ ಹರಿಯುತ್ತಿದೆ.
ಎಲ್ಲ ರೀತಿಯ ನೆರವು ನೀಡಲು ಸಿಎಂ ಸೂಚನೆ: ಪ್ರವಾಹ ಪೀಡಿತ ಜನರಿಗೆ ಎಲ್ಲ ರೀತಿಯ ನೆರವು ನೀಡುವಂತೆ ಮುಖ್ಯಮಂತ್ರಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಜಲಸಂಪನ್ಮೂಲ ಇಲಾಖೆಯು ಇಂಜಿನಿಯರ್‌ಗಳು ಮತ್ತು ಅಧಿಕಾರಿಗಳಿಗೆ ಅಲರ್ಟ್ ಮೋಡ್‌ನಲ್ಲಿ ಇರುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಟೈಫೂನ್ ’ಯಾಗಿ’ ಚಂಡಮಾರುತ ರೌದ್ರಾವತಾರ: ಪ್ರವಾಹ ನಿಭಾಯಿಸಲು ವಿದೇಶಿ ನೆರವಿಗೆ ಮ್ಯಾನ್ಮಾರ್ ಜುಂಟಾ ಮನವಿ - Typhoon Yagi