ರೋಹ್ಟಕ್ (ಹರಿಯಾಣ): ರೋಹ್ಟಕ್ ಜಿಲ್ಲೆಯ ಸಾಕ್ಷಿ ನರ್ವಾಲ್ ಸಿಡಿಎಸ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಸಂಯೋಜಿತ ರಕ್ಷಣಾ ಸೇವೆಗಳ ಪರೀಕ್ಷೆ (2) 2023 (Combined Defence Services Examination) ರಲ್ಲಿ ಸಾಕ್ಷಿ ಅವರು ಅಖಿಲ ಭಾರತ ಮಟ್ಟದಲ್ಲಿ ಮೊದಲ ಶ್ರೇಣಿ ಪಡೆದಿದ್ದಾರೆ. ಸಾಕ್ಷಿ ನರ್ವಾಲ್ ಪ್ರಸ್ತುತ ಮೊಹಾಲಿಯ ಸೇನಾ ಕಾನೂನು ಸಂಸ್ಥೆಯಲ್ಲಿ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದಾರೆ.
ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್ಸಿ) ಲಿಖಿತ ಪರೀಕ್ಷೆಯ ಬಳಿಕ, ಸೇವಾ ಆಯ್ಕೆ ಮಂಡಳಿಯು 5 ದಿನಗಳ ಕಠಿಣ ಆಯ್ಕೆ ಪ್ರಕ್ರಿಯೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಅಕ್ಟೋಬರ್ ತಿಂಗಳಿನಲ್ಲಿ ಚೆನ್ನೈನಲ್ಲಿರುವ ಆಫೀಸರ್ ಟ್ರೈನಿಂಗ್ ಅಕಾಡೆಮಿಯಲ್ಲಿ 49 ವಾರಗಳ ಸೇನಾ ತರಬೇತಿಯನ್ನು ನೀಡಲಾಗುತ್ತದೆ. ಯಶಸ್ವಿಯಾಗಿ ತರಬೇತಿ ಪೂರ್ಣಗೊಂಡ ನಂತರ, ಸಾಕ್ಷಿ ನರ್ವಾಲ್ ಅವರನ್ನು ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ನೇಮಿಸಲಾಗುತ್ತದೆ.