ಕರ್ನಾಟಕ

karnataka

ETV Bharat / bharat

ಪ್ರಥಮ ಸಂಪುಟ ಸಭೆಯಲ್ಲೇ ರಾಜ್ಯ ಸ್ಥಾನಮಾನ ಪುನಃಸ್ಥಾಪನೆಗೆ ನಿರ್ಣಯ: ಒಮರ್ ಅಬ್ದುಲ್ಲಾ

ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಪುನಃಸ್ಥಾಪಿಸುವುದು ತಮ್ಮ ಮೊದಲ ಆದ್ಯತೆಯಾಗಿದೆ ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ.

By ETV Bharat Karnataka Team

Published : 5 hours ago

ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ
ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ (IANS)

ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಪುನಃಸ್ಥಾಪಿಸುವಂತೆ ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸುವುದು ಜಮ್ಮು ಕಾಶ್ಮೀರ ಸಚಿವ ಸಂಪುಟದ ಮೊದಲ ನಿರ್ಣಯವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ (ಎನ್​ಸಿ) ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಬುಧವಾರ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಒಮರ್ ಅಬ್ದುಲ್ಲಾ, "ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಪುನಃಸ್ಥಾಪಿಸುವಂತೆ ಕೇಂದ್ರಕ್ಕೆ ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸುವುದು ಜಮ್ಮು ಮತ್ತು ಕಾಶ್ಮೀರ ಕ್ಯಾಬಿನೆಟ್​ನ ಮೊದಲ ಕೆಲಸವಾಗಲಿದೆ. ನಂತರ ಮುಖ್ಯಮಂತ್ರಿಗಳು ಈ ನಿರ್ಣಯವನ್ನು ದೆಹಲಿಗೆ ತೆಗೆದುಕೊಂಡು ಹೋಗಿ ರಾಜ್ಯದ ಸ್ಥಾನಮಾನ ಪುನಃಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬೇಕಿದೆ" ಎಂದು ಹೇಳಿದರು.

"ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಪುನಃಸ್ಥಾಪಿಸುವುದಾಗಿ ಪ್ರಧಾನಿ, ಗೃಹ ಸಚಿವರು ಮತ್ತು ಇತರರು ಭರವಸೆ ನೀಡಿದ್ದಾರೆ. ಆದರೆ ಬಿಜೆಪಿ ನೇತೃತ್ವದ ಸರ್ಕಾರ ಬಂದರೆ ಮಾತ್ರ ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸಲಾಗುವುದು ಎಂದು ಅವರು ಯಾವತ್ತೂ ಹೇಳಿಲ್ಲ" ಎಂದು ಅಬ್ದುಲ್ಲಾ ತಿಳಿಸಿದರು. "370 ನೇ ವಿಧಿಯನ್ನು ಪುನಃಸ್ಥಾಪಿಸುವ ಬೇಡಿಕೆಯನ್ನು ನಮ್ಮ ಪಕ್ಷ ಕೈಬಿಡುವುದಿಲ್ಲ. ಈ ಬಗ್ಗೆ ನಮ್ಮ ನಿಲುವು ಎಂದಿಗೂ ಬದಲಾಗುವುದಿಲ್ಲ" ಎಂದು ಅವರು ಪ್ರತಿಪಾದಿಸಿದರು.

ನಮ್ಮದು ಎಲ್ಲರನ್ನೂ ಒಳಗೊಂಡ ಸರ್ಕಾರವಾಗಲಿದೆ;"ನಾವು ರಚಿಸಲಿರುವ ಸರ್ಕಾರವು ನಮಗೆ ಮತ ಹಾಕಿದವರು, ನಮ್ಮ ವಿರುದ್ಧ ಮತ ಚಲಾಯಿಸಿದವರು ಮತ್ತು ಮತವನ್ನೇ ಚಲಾಯಿಸದವರು ಹೀಗೆ ಎಲ್ಲರನ್ನೂ ಪ್ರತಿನಿಧಿಸಲಿದೆ. ಹೊಸ ಸರ್ಕಾರದಲ್ಲಿ ಭಾಗವಾಗದ ಚುನಾಯಿತ ಪ್ರತಿನಿಧಿಗಳ ಪ್ರದೇಶಗಳಿಗೆ ವಿಶೇಷ ಗಮನ ನೀಡಲಾಗುವುದು" ಎಂದು ಅವರು ಹೇಳಿದರು.

ಪಕ್ಷಕ್ಕೆ ಸೇರ್ಪಡೆಯಾಗುವ ಶಾಸಕರ ಹೆಸರು ಹೇಳಲ್ಲ:ಎನ್​ಸಿಗೆ ಸೇರಬಹುದಾದ ಸ್ವತಂತ್ರ ಅಭ್ಯರ್ಥಿಗಳ ಹೆಸರುಗಳನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದರು. "ನಾನು ಅವರ ಹೆಸರನ್ನು ಏಕೆ ಹೇಳಬೇಕೆಂದು ನೀವು ಬಯಸುತ್ತೀರಿ? ಹಾಗೆ ಮಾಡಿದಲ್ಲಿ ಅವರಿಗೆ ಕಿರುಕುಳವಾಗಬಹುದು. ಕೆಲವರು ನಮ್ಮೊಂದಿಗೆ ಸೇರುವುದಾಗಿ ನಮಗೆ ತಿಳಿಸಿದ್ದಾರೆ. ಅವರು ನಮ್ಮೊಂದಿಗೆ ಸೇರಿದಾಗ ಅವರ ಹೆಸರುಗಳನ್ನು ಮಾಧ್ಯಮಗಳಿಂದ ಮರೆಮಾಡಲು ಸಾಧ್ಯವಾಗುವುದಿಲ್ಲ" ಎಂದು ಅಬ್ದುಲ್ಲಾ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

’ಶಾಸಕರೇ ಮುಂದಿನ ಸಿಎಂ ಹೆಸರು ಅಂತಿಮಗೊಳಿಸ್ತಾರೆ’:ನೀವು ಜಮ್ಮು ಮತ್ತು ಕಾಶ್ಮೀರದ ಮುಂದಿನ ಮುಖ್ಯಮಂತ್ರಿಯಾಗುವಿರಾ ಎಂದು ಕೇಳಿದಾಗ, "ಮೊದಲನೆಯದಾಗಿ ಎನ್​ಸಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಸಭೆಯಲ್ಲಿ ನಾಯಕನನ್ನು ಆಯ್ಕೆ ಮಾಡಲಾಗುವುದು. ನಂತರ ಮೈತ್ರಿಕೂಟದ ಪಾಲುದಾರರು ಸಭೆ ಸೇರಿ ಮುಖ್ಯಮಂತ್ರಿಯ ಹೆಸರನ್ನು ಅಂತಿಮಗೊಳಿಸುತ್ತಾರೆ. ಅದರ ನಂತರ, ಮೈತ್ರಿಕೂಟದ ನಾಮನಿರ್ದೇಶಿತ ನಾಯಕನು ರಾಜಭವನಕ್ಕೆ ಹೋಗಿ ಅಧಿಕಾರಕ್ಕಾಗಿ ಹಕ್ಕು ಮಂಡಿಸಲಿದ್ದಾರೆ. ನನ್ನ ಮಟ್ಟಿಗೆ ಹೇಳುವುದಾದರೆ, ಪ್ರಮಾಣ ವಚನ ಸ್ವೀಕಾರ ಸಮಾರಂಭ ಆದಷ್ಟು ಬೇಗ ನಡೆಯಬೇಕೆಂದು ಬಯಸುತ್ತೇನೆ. ನಾವು 2018 ರಿಂದ ಚುನಾಯಿತ ಸರ್ಕಾರವಿಲ್ಲದೆ ಇದ್ದೇವೆ ಮತ್ತು ಕೊನೆಗೂ ನಾವೀಗ ಕೆಲಸ ಮಾಡುವ ಸಮಯ ಒದಗಿ ಬಂದಿದೆ" ಎಂದು ಹೇಳಿದರು.

ಇದನ್ನೂ ಓದಿ : ನಾಲ್ವರು ಸ್ವತಂತ್ರ ಶಾಸಕರಿಂದ 'ಘರ್​ ವಾಪ್ಸಿ' ನಿರ್ಧಾರ: ಮ್ಯಾಜಿಕ್​ ನಂಬರ್​ ನಿರೀಕ್ಷೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್

ABOUT THE AUTHOR

...view details