ಸಂಭಾಲ್(ಉತ್ತರ ಪ್ರದೇಶ):ಶಾಹಿ ಜಾಮಾ ಮಸೀದಿಯ ಸಮೀಕ್ಷೆ ನಡೆಸಲು ಕೋರ್ಟ್ ನೇಮಿಸಿದ ಎಎಸ್ಐ ತಂಡ ಸ್ಥಳೀಯ ನ್ಯಾಯಾಲಯಕ್ಕೆ ಇಂದು ವರದಿ ಸಲ್ಲಿಸಲಿರುವ ಹಿನ್ನೆಲೆಯಲ್ಲಿ ಸಂಭಾಲ್ ಜಿಲ್ಲೆಯಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಶಾಹಿ ಜಾಮಾ ಮಸೀದಿ ಜಾಗದಲ್ಲಿ ಈ ಹಿಂದೆ ಹರಿಹರ ದೇಗುಲವಿತ್ತು. ಇದನ್ನು ಕೆಡವಿ ಮೊಘಲ್ ಕಾಲದಲ್ಲಿ ಮಸೀದಿ ನಿರ್ಮಿಸಲಾಗಿದೆ. ಇದರ ಸಮೀಕ್ಷೆಗೆ ಅವಕಾಶ ನೀಡಬೇಕು ಎಂಬ ವಾದವನ್ನು ಅರ್ಜಿದಾರರು ಮಂಡಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ ನ.19ರಂದು ಸಮೀಕ್ಷೆಗೆ ಅವಕಾಶ ನೀಡಿತ್ತು. ಅಂದಿನಿಂದ ಜಿಲ್ಲೆಯಲ್ಲಿ ಬಿಗುವಿನ ವಾತಾವರಣವಿದೆ.
ಸದ್ಯ ನಗರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಶಾಲೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಆದರೆ, ತಪ್ಪು ಮಾಹಿತಿ ಹರಡುವಿಕೆ ತಡೆಯುವ ಉದ್ದೇಶದಿಂದ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಸಮೀಕ್ಷಾ ವರದಿ ಸಲ್ಲಿಸುವ ಹಿನ್ನೆಲೆಯಲ್ಲಿ ಚಂಡೌಸಿಯಲ್ಲಿನ ಸ್ಥಳೀಯ ನ್ಯಾಯಾಲಯದ ಸುತ್ತಮುತ್ತ ಮತ್ತು ಧಾರ್ಮಿಕ ಸ್ಥಳಗಳ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮೊರಾದಾಬಾದ್ ವಿಭಾಗೀಯ ಆಯುಕ್ತ ಆಂಜನೇಯ ಕುಮಾರ್ ಸಿಂಗ್ ತಿಳಿಸಿದರು.