ನವದೆಹಲಿ:ರಾಷ್ಟ್ರಪತಿ ಭವನದ ಎರಡು ಪ್ರಮುಖ ಸಭಾಂಗಣಗಳಿಗೆ ದೇಶದ ಪ್ರಥಮ ಪ್ರಜೆ ದ್ರೌಪದಿ ಮುರ್ಮು ಅವರು ಮರು ನಾಮಕರಣ ಮಾಡಿದ್ದಾರೆ. 'ದರ್ಬಾರ್ ಹಾಲ್' ಮತ್ತು 'ಅಶೋಕ್ ಹಾಲ್' ಎಂದು ಗುರುತಿಸಲಾಗಿದ್ದ ಸಭಾಂಗಣಗಳನ್ನು 'ಗಣತಂತ್ರ ಮಂಟಪ' ಮತ್ತು 'ಅಶೋಕ್ ಮಂಟಪ' ಎಂದು ಭಾರತೀಯ ಸಂಸ್ಕೃತಿಯನ್ನು ಸೂಚಿಸುವ ಹೆಸರಿನಿಂದ ಬದಲಿಸಲಾಗಿದೆ.
ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾಗಿ ಇಂದಿಗೆ (ಜುಲೈ 25) 2 ವರ್ಷ ಪೂರೈಸಿದ್ದಾರೆ. ದೇಶದ ಪ್ರಥಮ ಪ್ರಜೆಯಾದ ಅವರು, ರಾಷ್ಟ್ರಪತಿ ಭವನದ ಕೆಲ ಭಾಗಗಳಿಗೆ ಈ ಹಿಂದಿನಿಂದ ಕರೆದುಕೊಂಡು ಬರಲಾಗಿದ್ದ ಹೆಸರನ್ನು ಬದಲಿಸುತ್ತಿರುವುದು ಇದು ಮೊದಲಲ್ಲ. ಭವನದ ಮುಂದಿರುವ ಮೊಘಲ್ ಗಾರ್ಡನ್ಗೆ 'ಅಮೃತ ಉದ್ಯಾನ' ಎಂದು ಬದಲಿಸಿದ್ದರು. ಇದೀಗ ಎರಡು ಮಂಟಪಗಳಿಗೂ ಹೊಸದಾಗಿ ಹೆಸರನ್ನು ಸೂಚಿಸಿದ್ದಾರೆ.
ರಾಷ್ಟ್ರಪತಿಗಳ ಆದೇಶದ ಬಗ್ಗೆ ಮಾಹಿತಿ ನೀಡಿರುವ ಭವನದ ಕಚೇರಿ, ದರ್ಬಾರ್ ಹಾಲ್ ಮತ್ತು ಅಶೋಕ ಹಾಲ್ನ ಹೆಸರನ್ನು ಇಂದಿನಿಂದ ಬದಲಿಸಲು ರಾಷ್ಟ್ರಪತಿಗಳು ಆದೇಶಿಸಿದ್ದಾರೆ. ರಾಷ್ಟ್ರಪತಿಗಳ ನಿವಾಸವಾದ ಭವನವು ರಾಷ್ಟ್ರದ ಸಂಕೇತವಾಗಿದೆ. ಜನರ ಅಮೂಲ್ಯ ಪರಂಪರೆಯಾಗಿದೆ. ಹೀಗಾಗಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಹೆಸರನ್ನು ಇಡಲಾಗಿದೆ ಎಂದಿದೆ.
ಗಣತಂತ್ರ ರಾಷ್ಟ್ರದ ಪ್ರತೀಕ:ನೂತನವಾಗಿ ಸೂಚಿಸಲಾಗಿರುವ ಮಂಟಪಗಳಿಗೆ ಜನರ ಪ್ರವೇಶಕ್ಕೆ ಅವಕಾಶ ನೀಡಲಾಗುವುದು. ರಾಷ್ಟ್ರಪತಿ ಭವನದಲ್ಲಿ ಭಾರತೀಯ ಸಾಂಸ್ಕೃತಿಕ ಮೌಲ್ಯಗಳು ಮತ್ತು ನೈತಿಕತೆಯನ್ನು ಪ್ರತಿಬಿಂಬಿಸುವ ನಿರಂತರ ಪ್ರಯತ್ನವಾಗುತ್ತಿದೆ. ಇದರ ದ್ಯೋತಕವೇ ಹಾಲ್ಗಳ ಮರುನಾಮಕರಣ. ಭಾರತ ರತ್ನ, ಪದ್ಮವಿಭೂಷಣದಂತಹ ರಾಷ್ಟ್ರೀಯ ಪ್ರಶಸ್ತಿಗಳ ಪ್ರದಾನದಂತಹ ಪ್ರಮುಖ ಸಮಾರಂಭಗಳು ಗಣತಂತ್ರ ಮಂಟಪ (ದರ್ಬಾರ್ ಹಾಲ್) ದಲ್ಲಿ ನಡೆಯುತ್ತಿದ್ದವು. 'ದರ್ಬಾರ್' ಪದವು ಭಾರತೀಯ ರಾಜರು, ಬ್ರಿಟಿಷರ ಕೋರ್ಟ್, ಶಾಸನಗಳು ನಡೆಯುವುದನ್ನು ಸೂಚಿಸುತ್ತದೆ. ಭಾರತವು ಗಣರಾಜ್ಯವಾದ ನಂತರ ಅದು ಪ್ರಸ್ತುತತೆಯನ್ನು ಕಳೆದುಕೊಂಡಿದೆ. ಹೀಗಾಗಿ ದರ್ಬಾರ್ ಬದಲಿಗೆ ‘ಗಣತಂತ್ರ’ ದೇಶದ ಪರಿಕಲ್ಪನೆಯಲ್ಲಿ ಈ ಹೆಸರನ್ನು ಇಡಲಾಗಿದೆ ಎಂದು ವಿವರಿಸಿದೆ.
ಆಂಗ್ಲೀಕರಣಕ್ಕೆ ಬ್ರೇಕ್:ಇನ್ನು, ಅಶೋಕ ಮಂಟಪವು (ಅಶೋಕ್ ಹಾಲ್) ಬಾಲ್ ರೂಂ ಆಗಿ ಬಳಕೆಯಾಗುತ್ತಿದೆ. ಅಶೋಕ ಎಂಬ ಪದವು "ಎಲ್ಲಾ ದುಃಖಗಳಿಂದ ಮುಕ್ತ" ಅಥವಾ "ದುಃಖದಿಂದ ದೂರವಿರು" ಎಂಬುದನ್ನು ಸೂಚಿಸುತ್ತದೆ. ಭಾರತದ ಸಾಮ್ರಾಟ ‘ಅಶೋಕ’ನನ್ನೂ ಹೆಸರಿಸುತ್ತದೆ. ಇದು ಏಕತೆ, ಶಾಂತಿ, ಸಹಬಾಳ್ವೆಯ ಸಂಕೇತವಾಗಿದೆ. 'ಅಶೋಕ್ ಹಾಲ್' ಆಂಗ್ಲ ಭಾಷೆಯಿಂದ ಕೂಡಿದ್ದು, ಹೀಗಾಗಿ ಅದನ್ನು 'ಅಶೋಕ ಮಂಟಪ' ಎಂದು ಮರುನಾಮಕರಣ ಮಾಡಲಾಗಿದೆ. 'ಅಶೋಕ' ಪದದ ಮೌಲ್ಯವನ್ನು ಎತ್ತಿಹಿಡಿಯುವುದರ ಮೂಲಕ ಆಂಗ್ಲೀಕರಣವನ್ನು ಕಿತ್ತು ಹಾಕಲಾಗಿದೆ ಎಂದು ಮಾಹಿತಿ ನೀಡಿದೆ.
ಮರುನಾಮಕರಣಕ್ಕೆ ಕಾಂಗ್ರೆಸ್ ಹೇಳಿದ್ದಿಷ್ಟು:ರಾಷ್ಟ್ರಪತಿ ಭವನದ ಸಭಾಂಗಣಗಳಿಗೆ ಮರುನಾಮಕರಣ ಮಾಡಿದ್ದಕ್ಕೆ ಕಾಂಗ್ರೆಸ್ ಆಕ್ಷೇಪ ರೀತಿಯಲ್ಲಿ ಪ್ರತಿಕ್ರಿಯಿಸಿದೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಅದು ದರ್ಬಾರ್ (ಆಡಳಿತ) ಪರಿಕಲ್ಪನೆಯಿಂದ ಕೂಡಿಲ್ಲ. ಅಲ್ಲಿ ರಾಜರು (ಶೆಹೆನ್‌ಶಾ) ಇದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.
ಇದನ್ನೂ ಓದಿ:ರಾಷ್ಟ್ರಪತಿಯಾಗಿ ಇಂದಿಗೆ 2 ವರ್ಷ ಪೂರೈಸಿದ ಮುರ್ಮು; ಮಕ್ಕಳಿಗೆ 'ದೇಶದ ಪ್ರಥಮ ಪ್ರಜೆ'ಯ ಪಾಠ - President Droupadi Murmu