ಮೊರೆನಾ (ಮಧ್ಯಪ್ರದೇಶ)/ ಹೈದರಾಬಾದ್ (ತೆಲಂಗಾಣ): ರೀಲ್ಸ್ ಮಾಡುವ ಹುಚ್ಚಿಗೆ ದೇಶದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಓರ್ವ ಯುವಕ ಹಾಗೂ ಓರ್ವ ಬಾಲಕ ಮೃತಪಟ್ಟಿದ್ದಾರೆ. ಮಧ್ಯ ಪ್ರದೇಶದ ಮೊರೆನಾದಲ್ಲಿ ನೇಣು ಕುಣಿಕೆ ಬಿಗಿದುಕೊಂಡು ರೀಲ್ಸ್ ಮಾಡುತ್ತಿದ್ದ ಬಾಲಕ ಮೃತಪಟ್ಟಿದ್ದರೆ, ಹೈದರಾಬಾದ್ನಲ್ಲಿ ರೀಲ್ಸ್ಗಾಗಿ ಬೈಕ್ ಸ್ಟಂಟ್ ಮಾಡುತ್ತಿದ್ದ ಯುವಕ ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಂಡಿದ್ದಾನೆ.
ಮೊರೆನಾದಲ್ಲಿ ನೇಣು ಕುಣಿಕೆ ಬಿಗಿದು 11 ವರ್ಷದ ಬಾಲಕ ಸಾವು:ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಡುವ ಸಲುವಾಗಿ ತಮಾಷೆಯ ರೀಲ್ ಚಿತ್ರೀಕರಿಸುವಾಗ 11 ವರ್ಷದ ಬಾಲಕ ನೇಣು ಬಿಗಿತದಿಂದ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಅಂಬಾ ಪಟ್ಟಣದಲ್ಲಿ ಶನಿವಾರ ಸಂಜೆ ನಡೆದ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ (ಎಸ್ಡಿಒಪಿ) ರವಿ ಭಡೋರಿಯಾ ತಿಳಿಸಿದ್ದಾರೆ.
7ನೇ ತರಗತಿ ವಿದ್ಯಾರ್ಥಿ ಕರಣ್ ಪರ್ಮಾರ್ ಎಂಬಾತ ತನ್ನ ಮನೆಯ ಬಳಿಯ ಖಾಲಿ ಜಾಗದಲ್ಲಿ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ. ಈ ಸಂದರ್ಭದಲ್ಲಿ ಮಕ್ಕಳು ಸೇರಿಕೊಂಡು ಕುತ್ತಿಗೆಗೆ ನೇಣು ಬಿಗಿದುಕೊಳ್ಳುವ ನಟನೆಯ ವೀಡಿಯೊ ಚಿತ್ರೀಕರಿಸಲು ಯತ್ನಿಸಿದ್ದಾರೆ. ಘಟನಾ ಸ್ಥಳದಲ್ಲಿ ಬಾಲಕನೊಬ್ಬ ಚಿತ್ರೀಕರಿಸಿದ ವೀಡಿಯೊದಲ್ಲಿ, ಮರಕ್ಕೆ ಹಗ್ಗ ಕಟ್ಟಿ ಕರಣ್ ಅದನ್ನು ತನ್ನ ಕುತ್ತಿಗೆಗೆ ಬಿಗಿದುಕೊಳ್ಳುವುದು, ಆತ ನೋವಿನಿಂದ ಬಳಲುತ್ತಿರುವಂತೆ ನಟಿಸುವುದು ಕಾಣಿಸುತ್ತದೆ.
ಆದರೆ ವಾಸ್ತವದಲ್ಲಿ ನೇಣು ಕುಣಿಕೆ ಬಿಗಿಯಾಗಿದ್ದರಿಂದ ಆತ ನಿಜವಾಗಿಯೂ ನರಳಿ ಪ್ರಜ್ಞೆ ಕಳೆದುಕೊಂಡ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕನ ಕುಟುಂಬಸ್ಥರು ಸ್ಥಳಕ್ಕೆ ಬಂದು ಅವನನ್ನು ಆಸ್ಪತ್ರೆಗೆ ಕರೆದೊಯ್ದರಾದರೂ, ಅಲ್ಲಿ ವೈದ್ಯರು ಅವನು ಮೃತಪಟ್ಟಿದ್ದಾನೆ ಎಂದು ಘೋಷಿಸಿದರು ಎಂದು ಅವರು ಹೇಳಿದರು. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಎಸ್ಡಿಒಪಿ ತಿಳಿಸಿದರು.
ಹೈದರಾಬಾದ್ನಲ್ಲಿ ಬೈಕ್ ಸ್ಟಂಟ್ಗೆ ಯುವಕ ಬಲಿ:ರೀಲ್ಸ್ ಕ್ರೇಜ್ಗೆ ಓರ್ವ ಯುವಕ ಬಲಿಯಾಗಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೈದರಾಬಾದ್ನ ಹೊರವಲಯದಲ್ಲಿರುವ ಹಯಾತ್ ನಗರದಲ್ಲಿ ನಡೆದಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ರಾಚಕೊಂಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಹಯಾತ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪೆದ್ದ ಅಂಬರ್ ಪೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಯುವಕನೊಬ್ಬ ತನ್ನ ಸ್ನೇಹಿತನೊಂದಿಗೆ ಬೈಕ್ನಲ್ಲಿ ಸ್ಟಂಟ್ ಮಾಡುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಯುವಕ ರೀಲ್ಸ್ಗಾಗಿ ಸ್ಪೋರ್ಟ್ಸ್ ಬೈಕ್ನಲ್ಲಿ ಸ್ಟಂಟ್ ಮಾಡುತ್ತಿದ್ದ. ಆದರೆ ನಿಯಂತ್ರಣ ಕಳೆದುಕೊಂಡ ಬೈಕ್ ಉರುಳಿ ಬಿದ್ದಿದ್ದರಿಂದ ಇಬ್ಬರೂ ಯುವಕರು ಕೆಳಗೆ ಬಿದ್ದು ತೀವ್ರ ಗಾಯಗೊಂಡರು. ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಹಿಂಬದಿ ಸವಾರಿ ಮಾಡುತ್ತಿದ್ದ ಮತ್ತು ಹೆಲ್ಮೆಟ್ ಧರಿಸದ ಶಿವ ಎಂಬಾತ ಭಾನುವಾರ ಮೃತಪಟ್ಟಿದ್ದಾನೆ. ಮಳೆಯಿಂದಾಗಿ ರಸ್ತೆ ಒದ್ದೆಯಾಗಿತ್ತು ಮತ್ತು ಅದೇ ಕಾರಣದಿಂದ ಬೈಕ್ ಸ್ಕಿಡ್ ಆಗಿ ದುರಂತ ಸಂಭವಿಸಿದೆ ಎಂದು ಶಂಕಿಸಲಾಗಿದೆ.
ಇದನ್ನೂ ಓದಿ : ಅಥಣಿ ಬಸ್ ನಿಲ್ದಾಣದಲ್ಲಿ ಶರ್ಟ್ ಬಿಚ್ಚಿ ರೀಲ್ಸ್ ಮಾಡಿದ ಯುವಕನಿಗೆ ಬುದ್ಧಿ ಕಲಿಸಿದ ಪೊಲೀಸರು