ನವದೆಹಲಿ/ಕೋಲ್ಕತ್ತಾ:ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಬಾಂಬರ್ ಮುಸ್ಸಾವಿರ್ ಹುಸೇನ್, ಇದರ ರೂವಾರಿ ಅಬ್ದುಲ್ ಮಥೀನ್ ತಾಹಾ ಬಂಧನ ವಿಷಯ ಕೇಂದ್ರದ ಆಡಳಿತಾರೂಢ ಬಿಜೆಪಿ ಮತ್ತು ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ ನಡುವೆ ಕೆಸರೆರಚಾಟಕ್ಕೆ ವೇದಿಕೆಯಾಗಿದೆ. ಟಿಎಂಸಿಯು ಪಶ್ಚಿಮ ಬಂಗಾಳವನ್ನು ಭಯೋತ್ಪಾದಕರ ಸುರಕ್ಷಿತ ತಾಣವನ್ನಾಗಿ ಮಾಡಿದೆ ಎಂದು ಬಿಜೆಪಿ ಆರೋಪಿಸಿದರೆ, ನಮ್ಮ ರಾಜ್ಯ ಪೊಲೀಸರ ತ್ವರಿತ ಕ್ರಮದಿಂದಾಗಿಯೇ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಮಾರ್ಚ್ 20ರ ಕೆಫೆ ಸ್ಫೋಟಪ್ರಕರಣದ ಪ್ರಮುಖ ಆರೋಪಿಗಳಾದ ಅಬ್ದುಲ್ ಮಥೀನ್ ತಾಹಾ, ಮುಸ್ಸಾವಿರ್ ಹುಸೇನ್ ಶಾಜೆಬ್ನನ್ನು 43 ದಿನಗಳ ಬಳಿಕ ರಾಷ್ಟ್ರೀಯ ತನಿಖಾ ದಳ (ಎಎನ್ಐ) ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕೋಲ್ಕತ್ತಾದ ಸಮೀಪದ ಗುರುತು ಬದಲಿಸಿಕೊಂಡು ಅಡಗಿದ್ದ ಈ ಭಯೋತ್ಪಾದಕರನ್ನು ಪತ್ತೆ ಹಚ್ಚಿ ಸೆರೆಹಿಡಿಯಲಾಗಿದೆ. ಕೇಂದ್ರದ ವಿವಿಧ ಸಂಸ್ಥೆಗಳು, ಕರ್ನಾಟಕ, ಪಶ್ಚಿಮ ಬಂಗಾಳ, ತಮಿಳುನಾಡು, ಉತ್ತರ ಪ್ರದೇಶ, ದೆಹಲಿ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯ ಪೊಲೀಸರೊಂದಿಗೆ ಸಮನ್ವಯ ಸಾಧಿಸಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಎನ್‌ಐಎ ಹೇಳಿದೆ.
ಉಗ್ರರ ಬಂಧನವಾಗುತ್ತಿದ್ದಂತೆ ಪಶ್ಚಿಮ ಬಂಗಾಳದ ಬಿಜೆಪಿ ಸಹ ಉಸ್ತುವಾರಿ ಅಮಿತ್ ಮಾಳವೀಯ, ''ರಾಮೇಶ್ವರಂ ಕೆಫೆ ಸ್ಫೋಟದ ಇಬ್ಬರು ಪ್ರಮುಖ ಶಂಕಿತ ಆರೋಪಿಗಳಾದ ಬಾಂಬರ್ ಮುಸ್ಸಾವಿರ್ ಹುಸೇನ್ ಶಾಜಿಬ್ ಮತ್ತು ಸಹಚರ ಅಬ್ದುಲ್ ಮಥೀನ್ ಅಹ್ಮದ್ ತಾಹಾನನ್ನು ಕೋಲ್ಕತ್ತಾದಲ್ಲಿ ಎನ್‌ಐಎ ವಶಕ್ಕೆ ಪಡೆದಿದೆ. ಇಬ್ಬರೂ ಕರ್ನಾಟಕದ ಶಿವಮೊಗ್ಗದಲ್ಲಿರುವ ಐಸಿಸ್ ಘಟಕಕ್ಕೆ ಸೇರಿರುವ ಸಾಧ್ಯತೆ ಇದೆ. ದುರದೃಷ್ಟವಶಾತ್ ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಪಶ್ಚಿಮ ಬಂಗಾಳ ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗವಾಗಿದೆ'' ಎಂದು ಆರೋಪಿಸಿದ್ದಾರೆ. ಬಿಜೆಪಿಯ ಈ ಆರೋಪದ ಬಗ್ಗೆ ಟಿಎಂಸಿ ತಕ್ಷಣವೇ ತಿರುಗೇಟು ನೀಡಿದೆ.