ಲಕ್ನೋ: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷರಾಗಿರುವ ಮಹಂತ್ ನೃತ್ಯ ಗೋಪಾಲ್ ದಾಸ್ ಅವರು ಭಾನುವಾರ ಸಂಜೆ ದಿಢೀರ್ ಅನಾರೋಗ್ಯ ಪರಿಸ್ಥಿತಿಗೆ ಒಳಗಾಗಿದ್ದು, ಇಲ್ಲಿನ ಮೆದಾಂತ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೀಗ ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದು, ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ
ಮೂತ್ರ ಸಮಸ್ಯೆಯ ಜೊತೆಗೆ ಕಡಿಮೆ ಆಹಾರ ಸೇವನೆಯಿಂದಾಗಿ ಅನಾರೋಗ್ಯಗೊಂಡಿದ್ದಾರೆ ಎಂದು ಆಸ್ಪತ್ರೆ ಬಿಡುಗಡೆ ಮಾಡಿರುವ ಬುಲೆಟಿನ್ನಲ್ಲಿ ತಿಳಿಸಲಾಗಿದೆ.
86 ವರ್ಷದ ಮಹಂತ್ ಆಗಸ್ಟ್ 24ರಂದು ಕೃಷ್ಣ ಜನ್ಮಾಷ್ಟಮಿ ಆಚರಣೆಗಾಗಿ ಅಯೋಧ್ಯೆಯಿಂದ ಮಥುರಾಕ್ಕೆ ತೆರಳಿದ್ದರು. ಇದಾದ ಬಳಿಕ ಭಕ್ತರನ್ನು ನೋಡಲು ಗ್ವಾಲಿಯರ್ಗೆ ಆಗಮಿಸಿದ್ದರು. ಅಲ್ಲಿ ಅನಾರೋಗ್ಯಕ್ಕೆ ತುತ್ತಾದ ಅವರು ಗ್ವಾಲಿಯರ್ನಲ್ಲಿ ಚಿಕಿತ್ಸೆ ಪಡೆದಿದ್ದರು. ಇದಾದ ಬಳಿಕ ಅವರು ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಮೆದಾಂತ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೀಗಿದ್ದರೂ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡಿರಲಿಲ್ಲ.
ನೃತ್ಯ ಗೋಪಾಲ್ ದಾಸ್ ಕುರಿತು..:1938ರ ಜೂನ್ 11ರಂದು ಮಥುರಾದಲ್ಲಿ ಮಹಂತ್ ನೃತ್ಯ ಗೋಪಾಲ್ ದಾಸ್ ಜನಿಸಿದರು. ಹಲವು ದಶಕಗಳ ಕಾಲ ರಾಮ ಜನ್ಮಭೂಮಿ ಆಂದೋಲನದಲ್ಲಿ ಭಾಗಿಯಾಗಿದ್ದರು. 2001ರಲ್ಲಿ ಇವರ ಮೇಲೆ ಬಾಂಬ್ ದಾಳಿ ನಡೆಸಲಾಗಿತ್ತು. ಅದೃಷ್ಟವಶಾತ್ ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದರು. 2003ರಲ್ಲಿ ಮತ್ತೆ ರಾಮ ಜನ್ಮಭೂಮಿ ನ್ಯಾಸ್ನ ಅಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು.
ಇದನ್ನೂ: ಕನ್ನಡದಲ್ಲಿ ಬರಲಿದೆ ಅಯೋಧ್ಯೆ ರಾಮ ಮಂದಿರ ಕುರಿತ ಬಯೋಪಿಕ್