ಜೈಪುರ: ರಾಮಜನ್ಮಭೂಮಿ ಚಳವಳಿಯ ಭಾಗವಾಗಿದ್ದ ರಾಯವಾಸ ಪೀಠಾಧೀಶ್ವರ ರಾಘವಾಚಾರ್ಯರು ಶುಕ್ರವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ರಾಜಸ್ಥಾನದ ರಾಜ್ಯಪಾಲರು, ಮುಖ್ಯಮಂತ್ರಿ ಸೇರಿದಂತೆ ಅನೇಕ ನಾಯಕರು ಅವರ ನಿಧನಕ್ಕೆ ದುಃಖ ವ್ಯಕ್ತಪಡಿಸಿದ್ದಾರೆ.
"ರಾಯವಾಸ ಪೀಠಾಧೀಶ್ವರ ರಾಘವಾಚಾರ್ಯರು ವೇದಗಳು ಮತ್ತು ಹಿಂದೂ ಸಂಸ್ಕೃತಿಯ ಜ್ಞಾನದ ಕಣಜವಾಗಿದ್ದರು ಮತ್ತು ಅವರ ಕೊಡುಗೆಯನ್ನು ಯಾವಾಗಲೂ ನೆನಪಿಸಿಕೊಳ್ಳಲಾಗುವುದು ಎಂದು" ರಾಜ್ಯಪಾಲ ಹರಿಭಾವು ಬಗಾಡೆ ಹೇಳಿದರು.
ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಕೂಡ ಅವರ ನಿಧನವನ್ನು ಭರಿಸಲಾಗದ ನಷ್ಟ ಎಂದು ಬಣ್ಣಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಜಸ್ಥಾನ ಮುಖ್ಯಮಂತ್ರಿ ಶರ್ಮಾ, "ಪರಮ ಪೂಜ್ಯ ರಾಯವಾಸ ಪೀಠಾಧೀಶ್ವರ ಶ್ರೀ ಶ್ರೀ ಶ್ರೀ ರಾಘವಾಚಾರ್ಯ ಜೀ ಮಹಾರಾಜ್ ಅವರ ನಿಧನದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಮಹಾರಾಜ್ ಜಿ ಅವರ ನಿಧನವು ಸನಾತನ ಮತ್ತು ಆಧ್ಯಾತ್ಮಿಕ ಜಗತ್ತಿಗೆ ಭರಿಸಲಾಗದ ನಷ್ಟವಾಗಿದೆ. ಆದರ್ಶ ಜೀವನಕ್ಕಾಗಿ ಅವರ ಶಕ್ತಿಯುತ ಆಲೋಚನೆಗಳು ಮತ್ತು ಸ್ಫೂರ್ತಿ ಯಾವಾಗಲೂ ಮಾನವೀಯತೆಗೆ ಶುಭವಾಗಿವೆ. ದುಃಖಿತ ಅನುಯಾಯಿಗಳಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ನೀಡುವಂತೆ ನಾನು ಭಗವಾನ್ ಶ್ರೀ ರಾಮ್ ಜೀ ಅವರನ್ನು ಪ್ರಾರ್ಥಿಸುತ್ತೇನೆ. ಓಂ ಶಾಂತಿ!" ಎಂದು ಬರೆದಿದ್ದಾರೆ.