ನವದೆಹಲಿ: ರಾಜ್ಯಸಭೆಯ ಕಾಂಗ್ರೆಸ್ ಸಂಸದ ಹಾಗೂ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಕೂರುವ ಸ್ಥಳದಲ್ಲಿ ನೋಟುಗಳ ಕಂತೆ ಸಿಕ್ಕಿದ್ದು ಭಾರಿ ಸಂಚಲನ ಮೂಡಿಸಿದೆ. ರಾಜ್ಯಸಭೆಯ ಸಭಾಪತಿ ಜಗದೀಪ್ ಧನಕರ್ ಅವರು ಶುಕ್ರವಾರ ಸದನಕ್ಕೆ ಮಾಹಿತಿ ನೀಡಿದ್ದು, ಸದನದಲ್ಲಿ ಕೋಲಾಹಲ ಸೃಷ್ಟಿಸಿದೆ.
ಸಭಾಧ್ಯಕ್ಷರು ಹೇಳಿದ್ದಿಷ್ಟು:ಗುರುವಾರ ಸದನ ಮುಂದೂಡಿಕೆಯಾದ ಬಳಿಕ ಚೇಂಬರ್‌ನಲ್ಲಿ ನಡೆದ ದೈನಂದಿನ ತಪಾಸಣೆ ಕುರಿತು ನಾನು ಸದಸ್ಯರಿಗೆ ಮಾಹಿತಿ ನೀಡಲು ಬಯಸುತ್ತೇನೆ. ತೆಲಂಗಾಣ ರಾಜ್ಯದಿಂದ ಆಯ್ಕೆಯಾಗಿರುವ ಅಭಿಷೇಕ್ ಮನು ಸಿಂಘ್ವಿ ಅವರಿಗೆ ಪ್ರಸ್ತುತ ಹಂಚಿಕೆ ಮಾಡಲಾಗಿರುವ ಸೀಟು ಸಂಖ್ಯೆ 222ರಿಂದ ಭದ್ರತಾ ಅಧಿಕಾರಿಗಳು ಕರೆನ್ಸಿ ನೋಟುಗಳ ಕಂತೆಯೊಂದನ್ನು ವಶಪಡಿಸಿಕೊಂಡಿದ್ದಾರೆ. ಈ ವಿಚಾರವನ್ನು ನನ್ನ ಗಮನಕ್ಕೆ ತರಲಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ನಾನು ಸೂಚನೆ ನೀಡಿದ್ದು, ಅದು ಪ್ರಗತಿಯಲ್ಲಿದೆ ಎಂದು ಜಗದೀಪ್ ಧನಕರ್ ಹೇಳಿದ್ದಾರೆ.
ನಾನು ಸದನದಲ್ಲಿ ಇದ್ದದ್ದೇ 3 ನಿಮಿಷ, ಹಣ ಬರಲು ಹೇಗೆ ಸಾಧ್ಯ: ಸಿಂಘ್ವಿ ಪ್ರಶ್ನೆ:ಕಾಂಗ್ರೆಸ್ ಸಂಸದ ಮತ್ತು ವಕೀಲ ಅಭಿಷೇಕ್ ಮನು ಸಿಂಘ್ವಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ನಾನು ಈ ವಿಚಾರ ಕೇಳಿ ಆಶ್ಚರ್ಯಚಕಿತನಾಗಿದ್ದೇನೆ. ನಾನು ನಿನ್ನೆ ಮಧ್ಯಾಹ್ನ 12.57 ಕ್ಕೆ ಸದನದ ಒಳಭಾಗವನ್ನು ತಲುಪಿದೆ. 1 ಗಂಟೆಗೆ ನಾನು ಸದನದಿಂದ ಹೊರ ಬಂದೆ. ಮಧ್ಯಾಹ್ನ, 1 ರಿಂದ 1:30 ರವರೆಗೆ ನಾನು ಅಯೋಧ್ಯಾ ಪ್ರಸಾದ್ ಅವರೊಂದಿಗೆ ಕ್ಯಾಂಟೀನ್‌ನಲ್ಲಿ ಕುಳಿತಿದ್ದೆ, ಆ ಬಳಿಕ ನಾನು ಅಲ್ಲಿಂದ ತೆರಳಿದ್ದೇನೆ. ನಾನು ಸದನದಲ್ಲಿದ್ದಿದ್ದು ಕೇವಲ 3 ನಿಮಿಷ. ಸಂಸತ್ನ ಕ್ಯಾಂಟೀನ್‌ನಲ್ಲಿ ಇದ್ದದ್ದು 30 ನಿಮಿಷಗಳು. ಇದು ಹೇಗೆ ಸಾಧ್ಯ, ಎಲ್ಲವೂ ವಿಲಕ್ಷಣವಾಗಿದೆ, ಅಲ್ಲಿ ಬಂದು, ನನ್ನ ಸೀಟಿನಲ್ಲಿ ಏನನ್ನಾದರೂ ಇಡುವುದು ಹೇಗೆ ಎಂಬ ಬಗ್ಗೆ ತನಿಖೆ ನಡೆಯಲೇಬೇಕು. ಇದರ ಅರ್ಥ, ಆಸನವನ್ನು ಸ್ವತಃ ಲಾಕ್ ಮಾಡುವಂತಹ ಹಾಗೂ ಸಂಸದರು ಅದರ ಕೀಗಳನ್ನು ಮನೆಗೆ ತೆಗೆದುಕೊಂಡು ಹೋಗಲು ಸಾಧ್ಯವಾಗುವಂತಹ ಸೀಟುಗಳು ಪ್ರತಿಯೊಬ್ಬರಿಗೂ ಬೇಕಾಗುತ್ತದೆ. ಏಕೆಂದರೆ ಪ್ರತಿಯೊಬ್ಬರೂ ಈ ರೀತಿ ಮಾಡಿ, ಇದರ ಬಗ್ಗೆ ಆರೋಪಗಳನ್ನು ಮಾಡಬಹುದು. ಇದು ದುರಂತ ಹಾಗೂ ಗಂಭೀರ ಅಲ್ಲದಿದ್ದರೆ ಹಾಸ್ಯಾಸ್ಪದ ಸಂಗತಿ ಎನಿಸಲಿದೆ. ಇದರ ಆಳಕ್ಕೆ ಇಳಿಯಲು ಪ್ರತಿಯೊಬ್ಬರರೂ ಸಹಕಾರ ನೀಡಬೇಕು. ಭದ್ರತಾ ಸಂಸ್ಥೆಗಳಿಂದ ಲೋಪವಾಗಿದ್ದರೂ ಅದು ಕೂಡ ಇಲ್ಲಿ ಸಂಪೂರ್ಣ ಬಹಿರಂಗವಾಗಬೇಕಿದೆ ಎಂದರು
ಇದನ್ನು ಓದಿ:ಶಿಂಧೆ ಇಲ್ಲದೆಯೂ ಸರ್ಕಾರ ರಚಿಸಲು ಬಿಜೆಪಿ ಸಿದ್ಧವಿತ್ತು: ಬಿಜೆಪಿ ವಿರುದ್ಧ ಸಂಜಯ್ ರಾವತ್ ವಾಗ್ದಾಳಿ