ನವದೆಹಲಿ:ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 33ನೇ ಪುಣ್ಯತಿಥಿ ನಿಮಿತ್ತ ಮಂಗಳವಾರ (ಮೇ 21) ನವದೆಹಲಿಯ ವೀರಭೂಮಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಸಂಸದ ರಾಹುಲ್ ಗಾಂಧಿ ಸೇರಿದಂತೆ ಗಣ್ಯರು ಶ್ರದ್ಧಾಂಜಲಿ ಸಲ್ಲಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು, ರಾಜೀವ್ ಗಾಂಧಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. "ನಮ್ಮ ಮಾಜಿ ಪ್ರಧಾನಿ ಶ್ರೀ ರಾಜೀವ್ ಗಾಂಧಿ ಜಿ ಪುಣ್ಯತಿಥಿ ನಿಮಿತ್ತ, ಅವರಿಗೆ ನನ್ನ ಶ್ರದ್ಧಾಂಜಲಿ" ಎಂದು ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಪಿ. ಚಿದಂಬರಂ ಮತ್ತು ಸಚಿನ್ ಪೈಲಟ್ ಅವರಂತಹ ಇತರ ಕಾಂಗ್ರೆಸ್ ನಾಯಕರು ರಾಷ್ಟ್ರ ರಾಜಧಾನಿಯಲ್ಲಿ ಮಾಜಿ ಪ್ರಧಾನಿಗೆ ಗೌರವ ನಮನ ಸಲ್ಲಿಸಿದರು. ಇಂದಿರಾ ಮತ್ತು ಫಿರೋಜ್ ಗಾಂಧಿ ಅವರ ಹಿರಿಯ ಮಗ ರಾಜೀವ್ ಗಾಂಧಿ ಅವರು 1984 ರಿಂದ 1989 ರವರೆಗೆ ಭಾರತದ 7ನೇ ಪ್ರಧಾನಿಯಾಗಿದ್ದರು. ಅವರನ್ನು 1991ರಲ್ಲಿ ಶ್ರೀಪೆರಂಬದೂರಿನಲ್ಲಿ ಎಲ್‌ಟಿಟಿಇ ಹತ್ಯೆ ಮಾಡಿತ್ತು.