ಕರ್ನಾಟಕ

karnataka

ETV Bharat / bharat

ದೆಹಲಿ ಕಾಲ್ತುಳಿತ: ತನಿಖಾ ಸಮಿತಿ ರಚನೆ, ಮೃತರಿಗೆ ₹10 ಲಕ್ಷ ಪರಿಹಾರ ಘೋಷಿಸಿದ ರೈಲ್ವೆ - DELHI STAMPEDE

ದೆಹಲಿ ರೈಲು ನಿಲ್ದಾಣದಲ್ಲಿನ ಭೀಕರ ಕಾಲ್ತುಳಿತ ಘಟನೆಯ ತನಿಖೆ ನಡೆಸಲು ಇಬ್ಬರು ಸದಸ್ಯರ ಸಮಿತಿ ರಚಿಸಲಾಗಿದೆ. ಜೊತೆಗೆ ಮೃತರು, ಗಾಯಾಳುಗಳಿಗೆ ಭಾರತೀಯ ರೈಲ್ವೆ ಪರಿಹಾರ ಘೋಷಿಸಿದೆ.

ದೆಹಲಿ ಕಾಲ್ತುಳಿತದಲ್ಲಿ ಕುಟುಂಬಸ್ಥರ ಕಳೆದುಕೊಂಡು ರೋದಿಸುತ್ತಿರುವ ಮಹಿಳೆ
ದೆಹಲಿ ಕಾಲ್ತುಳಿತದಲ್ಲಿ ತಮ್ಮವರನ್ನು ಕಳೆದುಕೊಂಡು ರೋದಿಸುತ್ತಿರುವ ಮಹಿಳೆ (PTI)

By ETV Bharat Karnataka Team

Published : Feb 16, 2025, 2:17 PM IST

Updated : Feb 16, 2025, 2:23 PM IST

ನವದೆಹಲಿ:ನವದೆಹಲಿ ರೈಲು ನಿಲ್ದಾಣದಲ್ಲಿ ಉಂಟಾದ ಭೀಕರ ಕಾಲ್ತುಳಿತ ಘಟನೆಯ ತನಿಖೆಗೆ ರೈಲ್ವೆ ಇಲಾಖೆ ಇಬ್ಬರು ಉನ್ನತಾಧಿಕಾರಿಗಳ ಸಮಿತಿ ರಚಿಸಿದೆ.

ಉತ್ತರ ರೈಲ್ವೆಯ ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ನರಸಿಂಗ್ ದಿಯೋ ಮತ್ತು ಉತ್ತರ ರೈಲ್ವೆಯ ಪ್ರಧಾನ ಮುಖ್ಯ ಭದ್ರತಾ ಆಯುಕ್ತ ಪಂಕಜ್ ಗಂಗ್ವಾರ್ ಸಮಿತಿಯ ಸದಸ್ಯರಾಗಿದ್ದಾರೆ ಎಂದು ರೈಲ್ವೆ ಭಾನುವಾರ ತಿಳಿಸಿದೆ.

ಸಮಿತಿ ರಚನೆಯ ಬೆನ್ನಲ್ಲೇ, ತನಿಖೆ ಪ್ರಾರಂಭಿಸಿರುವ ಸದಸ್ಯರು ನಿಲ್ದಾಣದ ಎಲ್ಲಾ ವಿಡಿಯೋ ದೃಶ್ಯಾವಳಿಗಳನ್ನು ಸುರಕ್ಷಿತವಾಗಿರಿಸಲು ಆದೇಶ ನೀಡಿದ್ದಾರೆ.

ಮೃತರ ಕುಟುಂಬಗಳಿಗೆ ಪರಿಹಾರ ಘೋಷಣೆ:ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಕುಟುಂಬಸ್ಥರಿಗೆ ರೈಲ್ವೆ ಇಲಾಖೆಯು ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿತು. ಗಂಭೀರವಾಗಿ ಗಾಯಗೊಂಡವರಿಗೆ 2.5 ಲಕ್ಷ ರೂ., ಸಣ್ಣಪುಟ್ಟ ಗಾಯಾಳುಗಳಿಗೆ 1 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ರೈಲ್ವೆ ತಿಳಿಸಿದೆ.

ಸಿಸಿಟಿವಿ ದೃಶ್ಯಾವಳಿಗಳ ತಪಾಸಣೆ:ಇನ್ನೊಂದೆಡೆ, ದೆಹಲಿ ಪೊಲೀಸರು ಘಟನೆಯ ತನಿಖೆ ಆರಂಭಿಸಿದ್ದಾರೆ. ರೈಲು ನಿಲ್ದಾಣದಲ್ಲಿ ಕಾಲ್ತುಳಿತ ಉಂಟಾಗಲು ನಿಖರ ಕಾರಣ ಪತ್ತೆಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

"ದುರಂತದಲ್ಲಿ ಮೃತಪಟ್ಟವರ ಬಗ್ಗೆ ಅವರ ಕುಟುಂಬಸ್ಥರಿಗೆ ತನಿಖಾ ತಂಡಗಳು ಮಾಹಿತಿ ನೀಡುತ್ತಿವೆ. ಕಾಲ್ತುಳಿತದ ಬಗ್ಗೆ ತನಿಖೆ ಮತ್ತು ವಿಚಾರಣಾ ಪ್ರಕ್ರಿಯೆ ಪ್ರಾರಂಭಿಸಿದ್ದೇವೆ" ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಕಾಲ್ತುಳಿತ ಸಂಭವಿಸಿದ ಸ್ಥಳ ಸೇರಿದಂತೆ ಇಡೀ ರೈಲು ನಿಲ್ದಾಣದ ಸಿಸಿಟಿವಿ ಡೇಟಾವನ್ನು ರಕ್ಷಿಸಲು ಸೂಚಿಸಲಾಗಿದೆ. ಪರಿಶೀಲನೆಯ ಬಳಿಕ ಘಟನೆಗೆ ಪ್ರಮುಖ ಕಾರಣ ತಿಳಿದುಬರಲಿದೆ ಎಂದು ಅಧಿಕಾರಿ ಹೇಳಿದರು.

ಆಗಿದ್ದೇನು?:ಶನಿವಾರ ರಾತ್ರಿ 10 ಗಂಟೆ ಸುಮಾರಿನಲ್ಲಿ ಕಾಲ್ತುಳಿತ ಘಟನೆ ಸಂಭವಿಸಿದೆ. ಇದರಿಂದ 14 ಮಹಿಳೆಯರು ಸೇರಿ 18 ಜನರು ಸಾವನ್ನಪ್ಪಿದ್ದಾರೆ. ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 14 ಮತ್ತು 15 ರಲ್ಲಿ ಮಹಾ ಕುಂಭಮೇಳಕ್ಕೆ ಹೊರಡಲು ಜನರು ಜಮಾಯಿಸಿದ್ದರು. ಈ ವೇಳೆ ಪ್ರಯಾಗ್​ರಾಜ್​ ಎಕ್ಸ್‌ಪ್ರೆಸ್​​ ರೈಲನ್ನು 14 ರಿಂದ 16ನೇ ಪ್ಲಾರ್ಟ್​ಫಾರ್ಮ್​ಗೆ ವರ್ಗಾಯಿಸಲಾಗಿದೆ. ಜನರು ಇದ್ದಕ್ಕಿದ್ದಂತೆ ದೌಡಾಯಿಸಿ ಬಂದಿದ್ದಾರೆ. ಈ ವೇಳೆ ಎಸ್ಕಲೇಟರ್​ ಮತ್ತು ಮೆಟ್ಟಿಲುಗಳಲ್ಲಿ ನೂಕುನುಗ್ಗಲು ಉಂಟಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ದೆಹಲಿ ರೈಲು ನಿಲ್ದಾಣದಲ್ಲಿ ಭೀಕರ ಕಾಲ್ತುಳಿತ: ಮಹಾ ಕುಂಭಮೇಳಕ್ಕೆ ಹೊರಟಿದ್ದ 18 ಮಂದಿ ಸಾವು

ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ ಸಂಭವಿಸಿದ್ದು ಹೇಗೆ?: ಪ್ರತ್ಯಕ್ಷದರ್ಶಿಗಳ ಮಾತು

Last Updated : Feb 16, 2025, 2:23 PM IST

ABOUT THE AUTHOR

...view details