ಪಾಟ್ನಾ: ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿಯವರ ಮೀಸಲಾತಿ ವಿರೋಧಿ ಹೇಳಿಕೆಯನ್ನು ಟೀಕಿಸಿರುವ ರಾಜಕೀಯ ತಂತ್ರಜ್ಞ ಹಾಗೂ ಜನ ಸುರಾಜ್ ಅಭಿಯಾನದ ಮುಖ್ಯಸ್ಥ ಪ್ರಶಾಂತ್ ಕಿಶೋರ್, ಹೇಳಿಕೆಯಿಂದ ಉಂಟಾಗಿರುವ ಗೊಂದಲವನ್ನು ರಾಹುಲ್ ನಿವಾರಿಸಬೇಕು ಎಂದು ಆಗ್ರಹಿಸಿದ್ದಾರೆ.
"ರಾಹುಲ್ ಗಾಂಧಿ ಮೀಸಲಾತಿಯ ಬಗ್ಗೆ ಆಗಾಗ ವಿಭಿನ್ನ ಹೇಳಿಕೆಗಳನ್ನು ನೀಡುವುದರಿಂದ ಮೀಸಲಾತಿ ಮತ್ತು ವ್ಯಾಪಕ ಸಾಮಾಜಿಕ ನ್ಯಾಯ ನೀತಿಗಳ ಬಗ್ಗೆ ಅವರ ಪಕ್ಷದ ನಿಲುವಿನ ಬಗ್ಗೆಯೇ ಸಂಶಯಗಳು ಸೃಷ್ಟಿಯಾಗುತ್ತಿರುವುದರಿಂದ ಈ ವಿಷಯದ ಬಗ್ಗೆ ಉಂಟಾಗಿರುವ ಗೊಂದಲವನ್ನು ಅವರೇ ನಿವಾರಿಸಬೇಕು" ಎಂದು ಕಿಶೋರ್ ಹೇಳಿದರು.
ವಾಷಿಂಗ್ಟನ್ ಡಿಸಿಯ ಜಾರ್ಜ್ ಟೌನ್ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಭಾರತದಲ್ಲಿ ಎಲ್ಲರಿಗೂ ಸಮಾನತೆ ಸಿಕ್ಕಾಗ ಮಾತ್ರ ಮೀಸಲಾತಿಯನ್ನು ಮುಂದುವರಿಸಬೇಕೆ ಅಥವಾ ಬೇಡವೆ ಎಂಬ ಬಗ್ಗೆ ಮರುಪರಿಶೀಲಿಸಬಹುದು ಹಾಗೂ ಸದ್ಯ ಭಾರತದಲ್ಲಿ ಅಂಥ ಪರಿಸ್ಥಿತಿ ಇಲ್ಲ ಎಂದು ಹೇಳಿದ್ದರು.
ಗಾಂಧಿ ಹೇಳಿಕೆ ಟೀಕಿಸಿದ ಕಿಶೋರ್:ರಾಹುಲ್ ಗಾಂಧಿಯವರ ಈ ನಿಲುವನ್ನು ಟೀಕಿಸಿದ ಕಿಶೋರ್, "ರಾಹುಲ್ ಗಾಂಧಿಗೆ ಯಾವ ಸಮಯದಲ್ಲಿ ಏನು ಹೇಳಬೇಕೆಂದೇ ಗೊತ್ತಿಲ್ಲ. ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ, ಅವರು ಶೇಕಡಾ 50 ರಷ್ಟಿರುವ ಮೀಸಲಾತಿ ಮಿತಿಯನ್ನು ಇನ್ನೂ ಹೆಚ್ಚಿಸಬೇಕೆಂದು ಪ್ರತಿಪಾದಿಸಿದ್ದರು ಮತ್ತು ದೇಶದಲ್ಲಿ ಜಾತಿ ಜನಗಣತಿ ನಡೆಸುವಂತೆ ಒತ್ತಾಯಿಸಿದ್ದರು. ಈಗ ಅಮೆರಿಕಕ್ಕೆ ಹೋಗಿ ಅಲ್ಲಿ ತಮ್ಮದೇ ಹೇಳಿಕೆಯನ್ನು ಅವರು ಹಿಂಪಡೆದಂತಾಗಿದೆ" ಎಂದು ಕಿಶೋರ್ ತಿಳಿಸಿದರು.
ಬಿಜೆಪಿಯೊಂದಿಗಿನ ರಾಜಕೀಯ ಮೈತ್ರಿಯ ಬಗ್ಗೆ, ವಿಶೇಷವಾಗಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್ಸಿ) ಯಂಥ ನೀತಿಗಳಿಗೆ ಸಂಬಂಧಿಸಿದಂತೆ ಪ್ರಶಾಂತ್ ಕಿಶೋರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಕೂಡ ಟೀಕಿಸಿದರು. ಹೆಚ್ಚಾಗಿ ಈ ಕಾನೂನುಗಳನ್ನು ವಿರೋಧಿಸುತ್ತಿರುವ ಮುಸ್ಲಿಂ ಸಮುದಾಯದ ಹಿತಾಸಕ್ತಿಗಳನ್ನು ಕಾಪಾಡುವ ಬದಲಾಗಿ ನಿತೀಶ್ ಕುಮಾರ್ ತಮ್ಮ ರಾಜಕೀಯ ಉಳಿವಿಗೆ ಆದ್ಯತೆ ನೀಡುತ್ತಿದ್ದಾರೆ ಎಂದು ಕಿಶೋರ್ ಆರೋಪಿಸಿದರು.
"ನಾನು ಜೆಡಿಯುನಲ್ಲಿದ್ದೆ. ಆದರೆ ಸಿಎಎ ಮತ್ತು ಎನ್ಆರ್ಸಿಯನ್ನು ವಿರೋಧಿಸಿದ್ದಕ್ಕಾಗಿ ನಿತೀಶ್ ಕುಮಾರ್ ನನ್ನನ್ನು ಪಕ್ಷದಿಂದ ಹೊರಹಾಕಿದರು. ನಿತೀಶ್ ಕುಮಾರ್ ಅವರು ತಾತ್ವಿಕ ನಿಲುವನ್ನು ತೆಗೆದುಕೊಳ್ಳುವುದಕ್ಕಿಂತ ಬಿಜೆಪಿಯೊಂದಿಗಿನ ಮೈತ್ರಿಯನ್ನು ಕಾಪಾಡಿಕೊಳ್ಳಲು ಹೆಚ್ಚು ಆಸಕ್ತಿ ಹೊಂದಿದ್ದಾರೆ" ಎಂದು ಕಿಶೋರ್ ಹೇಳಿದರು. ವಕ್ಫ್ ಕಾನೂನು ಸೇರಿದಂತೆ ಮುಸ್ಲಿಂ ಸಮುದಾಯದಲ್ಲಿ ಅಸಮಾಧಾನವನ್ನುಂಟು ಮಾಡುವ ಕಾನೂನುಗಳನ್ನು ಬೆಂಬಲಿಸುವ ಜೆಡಿಯುನಲ್ಲಿನ ಮುಸ್ಲಿಂ ನಾಯಕರನ್ನು ಕೂಡ ಅವರು ಟೀಕಿಸಿದರು.
ಇದನ್ನೂ ಓದಿ : ಆರ್ಥಿಕ ಬಿಕ್ಕಟ್ಟು: 700 ಕೋಟಿ ಸಾಲ ಪಡೆದ ಹಿಮಾಚಲ ಸರ್ಕಾರ; 2000 ಕೋಟಿ ಸಂಬಳ - ಪಿಂಚಣಿಯದ್ದೇ ಚಿಂತೆ - SUKHU GOVT TAKE 700 CRORE LOAN