ವಯನಾಡ್(ಕೇರಳ):ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ಪರ ಮತಪ್ರಚಾರ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕ್ಷೇತ್ರದ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಮಂಗಳವಾರ ವಯನಾಡ್‌ನ ಅತೀ ಉದ್ದದ ಜಿಪ್‌ಲೈನ್ ಸಾಹಸದಲ್ಲಿ ಭಾಗಿಯಾದರು. ಈ ಕುರಿತ ವಿಡಿಯೋವನ್ನು ಯುಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ.
"ಭೂ ಕುಸಿತದಂತಹ ಸವಾಲಿನ ನಡುವೆಯೂ ವಯನಾಡ್ ಅದ್ಭುತ ಪ್ರವಾಸಿ ಆಕರ್ಷಣೆ ಹೊಂದಿದೆ" ಎಂದು ರಾಹುಲ್ ತಿಳಿಸಿದ್ದಾರೆ. ಭೂಕುಸಿತಕ್ಕೊಳಗಾದ ಪ್ರದೇಶದ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ ಅವರು ಸಮಸ್ಯೆ ತಿಳಿದುಕೊಂಡರು.
ಬಳಿಕ ಮಾತನಾಡಿದ ರಾಹುಲ್ ಗಾಂಧಿ, "ಇಲ್ಲಿನ ಸ್ಪೂರ್ತಿದಾಯಕ ಸ್ಥಳೀಯ ಜನರೊಂದಿಗೆ ಸಂಪರ್ಕ ಸಾಧಿಸುವ ಅವಕಾಶ ನನಗೆ ಸಿಕ್ಕಿತು. ನೈಸರ್ಗಿಕ ವಿಪತ್ತಿನಂತಹ ಸವಾಲಿನ ಹೊರತಾಗಿಯೂ ಅವರು ದೃಢವಾಗಿ ನಿಂತಿದ್ದಾರೆ. ಇಲ್ಲಿನ ಪರಿಸರ ಬಹಳ ಸುಂದರವಾಗಿದೆ. ದಕ್ಷಿಣ ಭಾರತದ ಅತೀ ದೊಡ್ಡ ಡ್ರಾಪ್ ಟವರ್ ಮತ್ತು ರೋಮಾಂಚನಕಾರಿ ಜಿಪ್‌ಲೈನ್ ಸೇರಿದಂತೆ ಹಲವು ಪ್ರವಾಸಿ ಅದ್ಬುತಗಳು ಇಲ್ಲಿವೆ" ಎಂದು ಹೇಳಿದರು.