ಹೈದರಾಬಾದ್:ತೆಲಂಗಾಣ ಸರ್ಕಾರವು ನವೆಂಬರ್ 6ರಿಂದ ರಾಜ್ಯಾದ್ಯಂತ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಯನ್ನು ಆರಂಭಿಸಲಿದ್ದು, ಈ ಪ್ರಕ್ರಿಯೆಗೆ ಸಜ್ಜಾಗುವಂತೆ ರಾಜ್ಯ ಕಾಂಗ್ರೆಸ್ ಘಟಕಕ್ಕೆ ಸೂಚಿಸಲಾಗಿದೆ. ಸಮೀಕ್ಷೆಯ ಉದ್ಘಾಟನೆಗೆ ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಲು ಕಾಂಗ್ರೆಸ್ ನಾಯಕತ್ವ ಯೋಜಿಸಿದೆ.
ಜಾತಿ ಜನಗಣತಿಗೆ ಸಂಬಂಧಿಸಿದಂತೆ ಬುಧವಾರ ನಡೆದ ರಾಜ್ಯ ಕಾಂಗ್ರೆಸ್ ಘಟಕದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತು. ರಾಜ್ಯ ಅಧ್ಯಕ್ಷ ಮಹೇಶ್ ಕುಮಾರ್ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಮತ್ತು ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕರ್ಮಾರ್ಕ ಭಾಗವಹಿಸಿದ್ದರು. ಜಾತಿ ಗಣತಿಯನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದ ಗೌಡ, ರಾಜ್ಯದಲ್ಲಿ ಕೈಗೊಳ್ಳಲಾಗುವ ಈ ಕಾರ್ಯಕ್ರಮವು ದೇಶಕ್ಕೆ ಮಾದರಿಯಾಗಲಿದೆ. ಹೀಗಾಗಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಕಾರ್ಯಕ್ರಮಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದು ಅವರು ಹೇಳಿದರು.
ತೆಲಂಗಾಣವು ಸಮಗ್ರ ಜಾತಿ ಸಮೀಕ್ಷೆ ನಡೆಸುತ್ತಿರುವ ಮೊದಲ ರಾಜ್ಯವಾಗಿದೆ. ಅದರ ವರದಿಯ ಆಧಾರದ ಮೇಲೆ ಪ್ರತಿ ಕಲ್ಯಾಣ ಕಾರ್ಯಕ್ರಮಕ್ಕೆ ಹಂಚಿಕೆ ಮಾಡಬೇಕಾದ ಹಣದ ಪ್ರಮಾಣವನ್ನು ಸರ್ಕಾರ ನಿರ್ಧರಿಸಬಹುದು.
ರಾಹುಲ್ ಗಾಂಧಿಯವರು ಸಾಮಾಜಿಕ ನ್ಯಾಯಕ್ಕಾಗಿ ದಣಿವರಿಯದೆ ಕೆಲಸ ಮಾಡುತ್ತಿದ್ದಾರೆ ಎಂದ ಗೌಡ, ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಜಾತಿ ಜನಗಣತಿಯ ಬಗ್ಗೆ ರಾಹುಲ್ ಗಾಂಧಿ ಹೇಳಿದ ಮಾತನ್ನು ಸ್ಮರಿಸಿಕೊಂಡರು.