ಡೆಹ್ರಾಡೂನ್:ಉತ್ತರಾಖಂಡದ ಆಶ್ರಮವೊಂದರಲ್ಲಿ ವಾಸಿಸುವ 80 ವರ್ಷ ವಯಸ್ಸಿನ ಅಂಧ ವೃದ್ಧೆಯೊಬ್ಬರು ಕಾಂಗ್ರೆಸ್ ಸಂಸದ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ತನ್ನ ಚಿನ್ನಾಭರಣ ಮತ್ತು ಸ್ಥಿರ ಠೇವಣಿಗಳಿಗೆ ನಾಮನಿರ್ದೇಶನ ಮಾಡುವ ಮೂಲಕ ತನ್ನ ವಾಸ್ತವಿಕ ಉತ್ತರಾಧಿಕಾರಿಯಾಗಿ ಘೋಷಣೆ ಮಾಡಿ ವಿಶಿಷ್ಟ ಬಾಂಧವ್ಯವನ್ನು ಮೆರೆದಿದ್ದಾರೆ.
80 ವರ್ಷ ವಯಸ್ಸಿನ ಪುಷ್ಪಾ ಮುಂಜಿಯಾಲ್ ಡೆಹ್ರಾಡೂನ್ನ ದಲನ್ವಾಲಾ ಪ್ರದೇಶದಲ್ಲಿರುವ ಪ್ರೇಮ್ ಧಾಮ್ ಹೆಸರಿನ ಆಶ್ರಮದಲ್ಲಿ ವಾಸಿಸುತ್ತಿದ್ದಾರೆ. ಅಂಧರಾಗಿರುವ ಪುಷ್ಪಾ ತಮ್ಮ ಬಳಿ ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ಕೆಲ ಚಿನ್ನಾಭರಣ ಹಾಗೂ ತಮ್ಮ ಹೆಸರಿನಲ್ಲಿ ಎಫ್ಡಿಯನ್ನು ಹೊಂದಿದ್ದಾರೆ. ಸದ್ಯ ಈ ಎಲ್ಲ ಸಂಪತ್ತನ್ನು ಅವರು ತಮ್ಮ ನೆಚ್ಚಿನ ನಾಯಕ ರಾಹುಲ್ ಗಾಂಧಿಯವರಿಗೆ ನೀಡಲು ಬಯಸಿದ್ದಾರೆ.
ಉತ್ತರಾಖಂಡದ ಡೆಹ್ರಾಡೂನ್ ನಲ್ಲಿರುವ ಪ್ರೇಮ್ ಧಾಮ್ ಆಶ್ರಮ (ETV BHARAT) ರಾಹುಲ್ ಅವರನ್ನು ಭೇಟಿಯಾಗಲು ಬಯಸಿರುವ ಈ ವೃದ್ಧೆ, ಅವರ ಮೇಲಿನ ತಮ್ಮ ಪ್ರೀತಿಯ ಸಂಕೇತವಾಗಿ ತಮ್ಮ ಕೆಲ ಚಿನ್ನಾಭರಣ ಮತ್ತು ಎಫ್ಡಿಗಳಿಗೆ ರಾಹುಲ್ ಗಾಂಧಿಯನ್ನು ನಾಮನಿರ್ದೇಶನ ಮಾಡಿದ್ದಾರೆ. ರಾಹುಲ್ ಗಾಂಧಿ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಾಗ ತನ್ನೆಲ್ಲ ಸಂಪತ್ತನ್ನು ಅವರಿಗೆ ಹಸ್ತಾಂತರಿಸುವುದಾಗಿ ಪುಷ್ಪಾ ಹೇಳಿದರು.
ರಾಹುಲ್ ಗಾಂಧಿಯವರನ್ನು ತನ್ನ ವಾಸ್ತವಿಕ ಉತ್ತರಾಧಿಕಾರಿಯನ್ನಾಗಿ ಮಾಡುವ ಬಯಕೆಯ ಬಗ್ಗೆ ಮಾತನಾಡಿದ ಪುಷ್ಪಾ, "ರಾಹುಲ್ ಗಾಂಧಿ ರಾಜಮನೆತನಕ್ಕೆ ಸೇರಿದವರಾಗಿದ್ದಾರೆ. ಅದಕ್ಕಾಗಿಯೇ ನಾನು ಅವರನ್ನು ನನ್ನೆಲ್ಲ ಆಸ್ತಿಗೆ ಉತ್ತರಾಧಿಕಾರಿನ್ನಾಗಿ ಮಾಡಲು ಬಯಸುತ್ತಿದ್ದೇನೆ" ಎಂದರು.
ಡೆಹ್ರಾಡೂನ್ ನಲ್ಲಿರುವ ಪ್ರೇಮ್ ಧಾಮ್ ಆಶ್ರಮದಲ್ಲಿ ಪುಷ್ಪಾ ಮುಂಜಿಯಾಲ್ ಅವರಿಗೆ ಆರೈಕೆ (ETV BHARAT) "ನಾನು ನನ್ನ ಇಡೀ ಜೀವಮಾನದಲ್ಲಿ ಉಳಿಸಿದ ಆಸ್ತಿಯನ್ನು ಆರಂಭದಲ್ಲಿ ಪ್ರಧಾನ ಮಂತ್ರಿಗಳ ಪತ್ನಿಗೆ ನೀಡಲು ಬಯಸಿದ್ದೆ. ಆದರೆ ಅವರು ಎಲ್ಲಿದ್ದಾರೆಂಬುದು ನನಗೆ ಗೊತ್ತಿಲ್ಲ. ಹೀಗಾಗಿ ರಾಹುಲ್ ಗಾಂಧಿಯವರನ್ನೇ ನನ್ನ ಉತ್ತರಾಧಿಕಾರಿಯನ್ನಾಗಿಸಲು ನಿರ್ಧರಿಸಿದ್ದೇನೆ. ನಮ್ಮ ತಂದೆಯವರು ರಾಹುಲ್ ಗಾಂಧಿಯವರ ಕುಟುಂಬದೊಂದಿಗೆ ಕೌಟುಂಬಿಕ ಸಂಬಂಧ ಹೊಂದಿದ್ದರು. ಅಲ್ಲದೆ ರಾಹುಲ್ ಅವರ ವಿಚಾರಗಳಿಂದ ನಾನು ಪ್ರಭಾವಿತವಾಗಿದ್ದೇನೆ. ಈ ಎಲ್ಲ ಕಾರಣಗಳಿಂದ ಅವರನ್ನೇ ನಾನು ನನ್ನ ಉತ್ತರಾಧಿಕಾರಿಯನ್ನಾಗಿ ಮಾಡುತ್ತಿರುವೆ" ಎಂದು ಪುಷ್ಪಾ ಹೇಳಿದರು.
ಇದನ್ನೂ ಓದಿ : ತಿರುಪತಿ ಕಾಲ್ತುಳಿತ ಪ್ರಕರಣ; ಮೃತರ ಕುಟುಂಬಸ್ಥರಿಗೆ ತಲಾ ₹25 ಲಕ್ಷ ಪರಿಹಾರ ಘೋಷಿಸಿದ ಆಂಧ್ರ ಸರ್ಕಾರ - TIRUPATI STAMPEDE