ಹೈದರಾಬಾದ್:ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾದ (ಸೆಬಿ) ಅಧ್ಯಕ್ಷೆ ಮಾಧವಿ ಬುಚ್ ಅವರ ಮೇಲೆಯೇ ಅಮೆರಿಕದ ಹಿಂಡೆನ್ಬರ್ಗ್ ವರದಿಯು ಗಂಭೀರ ಆರೋಪ ಮಾಡಿದೆ. ಹೀಗಾಗಿ ಅವರು ಅದಾನಿ ಗ್ರೂಪ್ ತನಿಖೆಯಿಂದ ಹಿಂದೆ ಸರಿದು ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
ಅದಾನಿ ಗ್ರೂಪ್ ಮೇಲಿನ ಅವ್ಯವಹಾರದ ತನಿಖೆ ನಡೆಸುತ್ತಿರುವ ಸೆಬಿ ಮುಖ್ಯಸ್ಥರ ಮೇಲೆಯೆ ಹಿಂಡೆನ್ಬರ್ಗ್ ಸಂಸ್ಥೆಯು ಮಾಡಿರುವ ಗುರುತರ ಆರೋಪ ಬಿರುಗಾಳಿ ಎಬ್ಬಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ವಿಡಿಯೋ ಮಾಹಿತಿ ಹಂಚಿಕೊಂಡಿರುವ ರಾಹುಲ್ ಗಾಂಧಿ, ಸಾರ್ವಜನಿಕರು ಅನುಭವಿಸಿದ ನಷ್ಟವನ್ನು ಯಾರು ಭರಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಹೂಡಿಕೆದಾರರು ಭಾರೀ ನಷ್ಟವನ್ನು ಅನುಭವಿಸಿದರೆ ಪ್ರಧಾನಿ ನರೇಂದ್ರ ಮೋದಿ ಅಥವಾ ಸೆಬಿ ಮುಖ್ಯಸ್ಥ ಅಥವಾ ಗೌತಮ್ ಅದಾನಿಯನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆಯೇ?. ಸಣ್ಣ ಹೂಡಿಕೆದಾರರ ಸಂಪತ್ತನ್ನು ರಕ್ಷಿಸುವ ಹೊಣೆಗಾರಿಕೆ ಹೊಂದಿರುವ ಸೆಬಿಯ ಅಧ್ಯಕ್ಷರ ವಿರುದ್ಧವೇ ಗಂಭೀರ ಆರೋಪಗಳು ಬಂದಿವೆ. ತನಿಖೆಯಲ್ಲಿ ರಾಜಿ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಹೀಗಾಗಿ ಸೆಬಿ ಅಧ್ಯಕ್ಷರಾದ ಮಾಧವಿ ಪುರಿ ಬುಚ್ ಇನ್ನೂ ಏಕೆ ರಾಜೀನಾಮೆ ನೀಡಿಲ್ಲ ಎಂದು ಕೇಳಿದ್ದಾರೆ.
ಹೂಡಿಕೆದಾರರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕಳೆದುಕೊಂಡರೆ, ಯಾರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಪ್ರಧಾನಿ ಮೋದಿ ಅವರೋ, ಸೆಬಿ ಅಧ್ಯಕ್ಷರೋ ಅಥವಾ ಗೌತಮ್ ಅದಾನಿಯೋ?. ಸಾಮಾನ್ಯ ಜನರು ಅನುಭವಿಸಿದ ನಷ್ಟಕ್ಕೆ ಆರೋಪ ಕೇಳಿ ಬಂದವರಿಂದ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಲಿ:ಸೆಬಿ ಮತ್ತು ಗೌತಮ್ ಅದಾನಿ ಅವರ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡಬೇಕು. ಸ್ವಯಂ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಬೇಕು. ಪ್ರಧಾನಿ ಮೋದಿ ಅವರು ಅದಾನಿ ಗ್ರೂಪ್ ಅವ್ಯವಹಾರಗಳ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಯಾಕೆ ಹೆದರುತ್ತಾರೆ ಎಂಬುದು ಈಗ ಸ್ಪಷ್ಟವಾಗಿದೆ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.
ಆರೋಪವೇನು?:ಹಿಂಡನ್ಬರ್ಗ್ ರಿಸರ್ಚ್ ವರದಿಯ ಪ್ರಕಾರ, ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಮತ್ತು ಅವರ ಪತಿ ಮತ್ತು ಅದಾನಿ ಗ್ರೂಪ್ ವಿರುದ್ಧ ಕೇಳಿಬಂದ ಹಗರಣದಲ್ಲಿ ಬಳಸಲ್ಪಟ್ಟ ಅಸ್ಪಷ್ಟ ವಿದೇಶಿ ಷೇರುಗಳಲ್ಲಿ ಪಾಲು ಹೊಂದಿದ್ದಾರೆ ಎಂದು ಆರೋಪ ಮಾಡಲಾಗಿದೆ. ಆದರೆ, ಈ ಆರೋಪವನ್ನು ನಿರಾಧಾರ ಎಂದಿರುವ ಸೆಬಿ ಅಧ್ಯಕ್ಷೆ ಮಾಧವಿ, ತಮ್ಮ ಹಣಕಾಸು ವ್ಯವಹಾರವು ತೆರೆದ ಪುಸ್ತಕ ಎಂದು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ:ಹಿಂಡೆನ್ಬರ್ಗ್ v/s ಅದಾನಿ: SEBI ಸಂಸ್ಥೆಯ ಪಾತ್ರವೇನು ಗೊತ್ತಾ? - Functions of sebi