ಹೈದರಾಬಾದ್: ''ತೆಲಂಗಾಣದಿಂದ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ಪರ್ಧಿಸುವ ಸಾಧ್ಯತೆಯಿದ್ದು, ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ'' ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ತಿಳಿಸಿವೆ. ರಾಜ್ಯದಿಂದ ಗರಿಷ್ಠ ಸಂಸದ ಸ್ಥಾನಗಳನ್ನು ಗೆಲ್ಲಲೇಬೇಕು ಎಂಬ ಹಠ ಹಿಡಿದಿರುವ ಕಾಂಗ್ರೆಸ್ ಪಕ್ಷ, ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ತೀವ್ರಗೊಳಿಸಿದೆ. ಬಹುತೇಕ ಸ್ಥಾನಗಳ ಅಭ್ಯರ್ಥಿಗಳ ಬಗ್ಗೆ ಈಗಾಗಲೇ ನಿರ್ಧಾರಕ್ಕೆ ಬರಲಾಗಿದೆ. ತೆಲಂಗಾಣದಿಂದ ರಾಹುಲ್ ಗಾಂಧಿ ಸ್ಪರ್ಧಿಸಿದರೆ ಇಲ್ಲಿ ಪಕ್ಷದ ಪ್ರಭಾವ ಹೆಚ್ಚಲಿದೆ ಎಂದು ಕಾಂಗ್ರೆಸ್ ಮೂಲಗಳು ಭರವಸೆ ವ್ಯಕ್ತಪಡಿಸಿವೆ.
ಪಿಸಿಸಿ ಅಧ್ಯಕ್ಷ, ಮುಖ್ಯಮಂತ್ರಿ ರೇವಂತ್ ರೆಡ್ಡಿ, ಉಪ ಮುಖ್ಯಮಂತ್ರಿ ಭಟ್ಟಿವಿಕ್ರಮಮಾರ್ಕ ಮತ್ತು ಕಂದಾಯ ಸಚಿವ ಪೊಂಗುಲೇಟಿ ಶ್ರೀನಿವಾಸ ರೆಡ್ಡಿ ಕೆಲವು ವರ್ಷಗಳ ಹಿಂದೆ ತೆಲಂಗಾಣ ರಾಜ್ಯದಿಂದ ಸ್ಪರ್ಧಿಸುವಂತೆ ಸೋನಿಯಾ ಗಾಂಧಿ ಅವರಿಗೆ ಮನವಿ ಮಾಡಿದ್ದರು. ಆದರೆ, ಆರೋಗ್ಯದ ಕಾರಣದಿಂದ ನೇರ ಚುನಾವಣೆಗೆ ಸ್ಪರ್ಧಿಸಲು ಇಚ್ಛಿಸದೇ ಕ್ಷೇತ್ರಕ್ಕೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಖಮ್ಮಂ ಅಥವಾ ಭುವನಗಿರಿಯಿಂದ ಸ್ಪರ್ಧೆ ಸಾಧ್ಯತೆ?: ತೆಲಂಗಾಣ ರಾಜ್ಯದಿಂದ ರಾಜ್ಯಸಭಾ ಸದಸ್ಯೆಯಾಗಿ ನಿಲ್ಲುವಂತೆ ಒತ್ತಾಯಿಸಿದ್ದರೂ, ಸೋನಿಯಾ ಗಾಂಧಿ ರಾಜಸ್ಥಾನದಿಂದ ಆಯ್ಕೆ ಮೇಲ್ಮನೆಗೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಹೆಸರು ಮುನ್ನೆಲೆಗೆ ಬಂದಿದೆ. ಪ್ರಸ್ತುತ ಕೇರಳದ ವಯನಾಡು ಸಂಸದರಾಗಿರುವ ರಾಹುಲ್ ಅವರನ್ನು ತೆಲಂಗಾಣದಿಂದ ಸ್ಪರ್ಧಿಸುವಂತೆ ಮಾಡುವ ಬಗ್ಗೆ ಮುಖ್ಯಮಂತ್ರಿಗಳು, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಇತರರೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.