ಕರ್ನಾಟಕ

karnataka

ETV Bharat / bharat

ರಾಯ್ ಬರೇಲಿ: ತಾಯಿ ಸೋನಿಯಾ ಗೆಲುವಿನ ಅಂತರವನ್ನೂ ಮೀರಿ ಮುನ್ನಡೆದ ರಾಹುಲ್​ - Rahul Gandhi - RAHUL GANDHI

ಉತ್ತರ ಪ್ರದೇಶದ ರಾಯ್ ಬರೇಲಿ ಲೋಕಸಭೆ ಕ್ಷೇತ್ರದಲ್ಲಿ ರಾಹುಲ್ ಗಾಂಧಿ 2.27 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಈ ಮೂಲಕ 2019ರ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಕಂಡಿದ್ದ ಗೆಲುವಿನ ಅಂತರವನ್ನೂ ಮೀರಿಸಿದ್ದಾರೆ.

Rahul Gandhi, Sonia Gandhi
ರಾಹುಲ್ ರಾಹುಲ್​ , ಸೋನಿಯಾ ಗಾಂಧಿ (ETV Bharat)

By PTI

Published : Jun 4, 2024, 3:18 PM IST

ಲಖನೌ (ಉತ್ತರ ಪ್ರದೇಶ): ದೇಶದಲ್ಲಿ ಅತಿಹೆಚ್ಚು 80 ಲೋಕಸಭೆ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಮತ ಎಣಿಕೆ ಮುಂದುವರೆದಿದೆ. ರಾಯ್ ಬರೇಲಿ ಕ್ಷೇತ್ರದಲ್ಲಿ ಹಾಲಿ ಸಂಸದೆಯಾಗಿದ್ದ ಕಾಂಗ್ರೆಸ್​ ನಾಯಕಿ, ತಾಯಿ ಸೋನಿಯಾ ಗಾಂಧಿ ಅವರ ಗೆಲುವಿನ ಅಂತರವನ್ನು ಪುತ್ರ ರಾಹುಲ್ ಗಾಂಧಿ ಮುರಿದಿದ್ದಾರೆ. ಸದ್ಯದ ಟ್ರೆಂಡ್​ ಪ್ರಕಾರ, ಪ್ರತಿಸ್ಪರ್ಧಿ ಬಿಜೆಪಿಯ ದಿನೇಶ್ ಪ್ರತಾಪ್ ಸಿಂಗ್ ವಿರುದ್ಧ ರಾಹುಲ್​ 2,27,535 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ರಾಯ್ ಬರೇಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಸೋನಿಯಾ ಗಾಂಧಿ ಈ ಬಾರಿ ರಾಜ್ಯಸಭೆ ಮೂಲಕ ಸಂಸತ್ತಿಗೆ ಪ್ರವೇಶಿಸಿದ್ದಾರೆ. ಕಾಂಗ್ರೆಸ್​ನ ಭದ್ರಕೋಟೆಯಾದ ರಾಯ್ ಬರೇಲಿ ಕ್ಷೇತ್ರದಿಂದ ರಾಹುಲ್ ಗಾಂಧಿ ಮೊದಲ ಬಾರಿಗೆ ಸ್ಪರ್ಧಿಸಿದ್ದಾರೆ. ಇಂದು ಬೆಳಗ್ಗೆ ಮತ ಎಣಿಕೆ ಆರಂಭದಿಂದಲೂ ಸತತವಾಗಿ ಕಾಂಗ್ರೆಸ್​ ನಾಯಕ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ಅಲ್ಲದೇ, 2019ರ ಚುನಾವಣೆಯಲ್ಲಿ ಸೋನಿಯಾ ಕಂಡಿದ್ದ ಗೆಲುವಿನ ಅಂತರವನ್ನೂ ಮೀರಿಸಿದ್ದಾರೆ.

2019ರಲ್ಲಿ ದಿನೇಶ್ ಪ್ರತಾಪ್ ಸಿಂಗ್ ವಿರುದ್ಧ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ 1,67,178 ಮತಗಳ ಅಂತರದಿಂದ ಗೆದ್ದಿದ್ದರು. ಈ ಬಾರಿ ಸಹ ಬಿಜೆಪಿಯಿಂದ ದಿನೇಶ್ ಪ್ರತಾಪ್ ಸಿಂಗ್ ರಾಯ್ ಬರೇಲಿಯಿಂದ ಸ್ಪರ್ಧಿಸಿದ್ದಾರೆ. ಯೋಗಿ ಆದಿತ್ಯನಾಥ್ ಸಂಪುಟದ ಸಚಿವರೂ ಆದ ದಿನೇಶ್ ವಿರುದ್ಧ ರಾಹುಲ್​ 2,27,535 ಮತಗಳಿಂದ ಮುನ್ನಡೆಯಲ್ಲಿದ್ದಾರೆ. ರಾಹುಲ್ 2004ರಿಂದ 2019ರವರೆಗೆ ಅಮೇಥಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಸೋಲು ಕಂಡಿದ್ದರು.

ವಯನಾಡಿನಲ್ಲೂ ರಾಹುಲ್​ ಮುನ್ನಡೆ:ಕೇರಳದ ವಯನಾಡು ಲೋಕಸಭೆ ಕ್ಷೇತ್ರದಿಂದಲೂ ರಾಹುಲ್​ ಗಾಂಧಿ ಸ್ಪರ್ಧಿಸಿದ್ದಾರೆ. ಈ ಕ್ಷೇತ್ರದಲ್ಲಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಸಿಪಿಐನ ಅನ್ನಿ ರಾಜ ವಿರುದ್ಧ 3,44,709 ಮತಗಳ ಭರ್ಜರಿ ಮುನ್ನಡೆಯಲ್ಲಿ ಸಾಗಿದ್ದಾರೆ. 2019ರ ಚುನಾವಣೆಯಲ್ಲಿ ರಾಹುಲ್​ ಗಾಂಧಿ ಇದೇ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ಅಖಿಲೇಶ್, ಪತ್ನಿ ಡಿಂಪಲ್​ಗೂ ಮುನ್ನಡೆ: ಇದೇ ವೇಳೆ, 'ಇಂಡಿಯಾ' ಮೈತ್ರಿಕೂಟದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಮತ್ತು ಅವರ ಪತ್ನಿ ಡಿಂಪಲ್ ಯಾದವ್ ಸಹ ಮುನ್ನಡೆ ಸಾಧಿಸಿದ್ದಾರೆ. ಅಖಿಲೇಶ್ ಕನೌಜ್‌ನಲ್ಲಿ ಬಿಜೆಪಿಯ ಸುಬ್ರತ್ ಪಾಠಕ್ ಅವರಿಂದ 61,351 ಮತಗಳ ಅಂತರದಿಂದ ಮುನ್ನಡೆಯಲ್ಲಿದ್ದರೆ, ಮೈನ್‌ಪುರಿಯಲ್ಲಿ ಡಿಂಪಲ್ ತಮ್ಮ ಹತ್ತಿರದ ಪ್ರತಿಸ್ಪರ್ಧಿ ಬಿಜೆಪಿಯ ಜೈವೀರ್ ಸಿಂಗ್ ವಿರುದ್ಧ 68,261 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ಅಜಂಗಢದಲ್ಲಿ ಎಸ್‌ಪಿಯ ಧರ್ಮೇಂದ್ರ ಯಾದವ್, ಬಿಜೆಪಿಯ ದಿನೇಶ್ ಲಾಲ್ ಯಾದವ್ ನಿರಾಹುವಾ ವಿರುದ್ಧ 45,069 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಫಿರೋಜಾಬಾದ್‌ನಲ್ಲಿ ಪಕ್ಷದ ನಾಯಕ ರಾಮ್ ಗೋಪಾಲ್ ಯಾದವ್ ಅವರ ಪುತ್ರ ಅಕ್ಷಯ್ ಯಾದವ್, ಬಿಜೆಪಿಯ ವಿಶ್ವದೀಪ್ ಸಿಂಗ್ ವಿರುದ್ಧ 56,986 ಮತಗಳ ಅಂತರದಿಂದ ಮುನ್ನಡೆಯಲ್ಲಿದ್ದಾರೆ.

ABOUT THE AUTHOR

...view details