ಪುಣೆ (ಮಹಾರಾಷ್ಟ್ರ):ಪುಣೆಯಲ್ಲಿ ಇತ್ತೀಚೆಗೆ ನಡೆದ ಪೋರ್ಶೆ ಕಾರು ಅಪಘಾತ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಇಬ್ಬರ ಸಾವಿಗೆ ಕಾರಣವಾದ 17 ವರ್ಷದ ಅಪ್ರಾಪ್ತ ವಯಸ್ಕನ ತಾತನನ್ನು ಬಂಧಿಸಲಾಗಿದೆ. ಕುಟುಂಬದ ಕಾರು ಚಾಲಕನನ್ನು ಅಕ್ರಮವಾಗಿ ಕೂಡಿ ಹಾಕಿದ್ದ ಆರೋಪದಲ್ಲಿ ಅವರನ್ನು ಬಂಧಿಸಲಾಗಿದೆ. ಜೊತೆಗೆ, ಈ ಪ್ರಕರಣ ಕನ್ನಡದ ಸಪ್ತಸಾಗರದಾಚೆ ಸಿನಿಮಾದಲ್ಲಿನ ಕತೆಗೂ ಸಾಮ್ಯತೆ ಇದೆ.
ಪ್ರಕರಣದ ಆರೋಪ ಹೊತ್ತುಕೊಳ್ಳಲು ಕುಟುಂಬದ ಕಾರು ಚಾಲಕನ ಮೇಲೆ ಒತ್ತಡ, ಬೆದರಿಕೆ ಹಾಕಿದ ಆರೋಪದ ಮೇಲೆ ಅಪ್ರಾಪ್ತನ ಅಜ್ಜ ವಿಶಾಲ್ ಅಗರ್ವಾಲ್ರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಕಾರನ್ನು ತಮ್ಮ ಮೊಮ್ಮಗ ಓಡಿಸಿಲ್ಲ ಎಂದು ಪ್ರಕರಣವನ್ನು ತಿರುಚಲು ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸಿನಿಮಾ ನೆನಪಿಸಿದ ಪ್ರಕರಣ:ಬಾಲಕ ಅಪಘಾತ ಮಾಡಿದ ಬಳಿಕ ಪ್ರಕರಣವನ್ನು ತಿರುಚಲು ಕುಟುಂಬಸ್ಥರು ಕಾರು ಚಾಲಕನ ಮೇಲೆ ಒತ್ತಡ ಹೇರಿದ್ದಾರೆ. ಈ ಪ್ರಕರಣವನ್ನು ತಾನೇ ಮಾಡಿದ್ದಾಗಿ ಒಪ್ಪಿಕೊಳ್ಳಲು ಆತನನ್ನು ಕೋರಲಾಗಿದೆ. ಪ್ರಕರಣದಲ್ಲಿ ಯಾವುದೇ ಶಿಕ್ಷೆಯಾಗದಂತೆ ನೋಡಿಕೊಂಡು, ಜೈಲಿಗೆ ಹೋದಲ್ಲಿ ಬಿಡಿಸಿಕೊಂಡು ಬರುವುದಾಗಿ ಭರವಸೆ ನೀಡಲಾಗಿತ್ತು. ಜೊತೆಗೆ ಹಣದ ಆಫರ್ ನೀಡಿದ್ದರು. ಇದಕ್ಕೆ ತಾವು ಒಪ್ಪದ ಕಾರಣ ತನ್ನನ್ನು ಕೂಡಿ ಹಾಕಲಾಗಿತ್ತು ಎಂದು ಚಾಲಕ ಆರೋಪ ಮಾಡಿದ್ದಾನೆ.
ಕನ್ನಡದಲ್ಲಿ ಇತ್ತೀಚೆಗೆ ತೆರೆಕಂಡಿದ್ದ ಕನ್ನಡ ಸಿನಿಮಾವೊಂದರಲ್ಲೂ ಕೂಡ ಶ್ರೀಮಂತ ಕುಟುಂಬದ ವ್ಯಕ್ತಿಯೊಬ್ಬ ಅಪಘಾತ ಮಾಡಿದ ಬಳಿಕ ಅದನ್ನು, ನಾಯಕನ ಹಣೆಗೆ ಕಟ್ಟಿ ಆತನನ್ನು ಬಿಡಿಸಿಕೊಂಡು ಬರುವ ಭರವಸೆ ನೀಡಲಾಗಿರುತ್ತದೆ. ಅದೇ ಮಾದರಿಯ ಬೆಳವಣಿಗೆ ಪೋರ್ಶೆ ಪ್ರಕರಣದಲ್ಲೂ ನಡೆದಿದೆ.