ವಯನಾಡು, ಕೇರಳ:ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬುಧವಾರ ಕೇರಳದ ವಯನಾಡುಗೆ ಭೇಟಿ ನೀಡಲಿದ್ದಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅಂದು ನಾಮಪತ್ರ ಸಲ್ಲಿಸಲಿದ್ದು, ತಾಯಿ ಸೋನಿಯಾ ಈ ಸಂದರ್ಭದಲ್ಲಿ ಅವರ ಜೊತೆಗಿರಲಿದ್ದಾರೆ. ಇದಲ್ಲದೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮೂವರು ಕಾಂಗ್ರೆಸ್ ಮುಖ್ಯಮಂತ್ರಿಗಳು ಮತ್ತು ಇತರ ರಾಷ್ಟ್ರೀಯ ಹಿರಿಯ ಕಾಂಗ್ರೆಸ್ ನಾಯಕರು ಕೂಡ ಬುಧವಾರ ಕೇರಳಕ್ಕೆ ಭೇಟಿ ನೀಡಲಿದ್ದಾರೆ.
ನಾಮಪತ್ರ ಸಲ್ಲಿಕೆಗೂ ಮುನ್ನ ಭರ್ಜರಿ ರೋಡ್ ಶೋ:ಪ್ರಿಯಾಂಕಾ ಗಾಂಧಿಯವರ ನಾಮಪತ್ರ ಸಲ್ಲಿಕೆಗೂ ಮುಂಚೆ ಕಲ್ಪೆಟ್ಟಾದಲ್ಲಿ ರೋಡ್ ಶೋ ನಡೆಯಲಿದೆ. ಈ ರೋಡ್ ಶೋನ ಕೊನೆಯ ಕ್ಷಣದ ವ್ಯವಸ್ಥೆಗಳ ಮೇಲ್ವಿಚಾರಣೆ ನಡೆಸುತ್ತಿರುವ ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಕಾಸರಗೋಡು ಲೋಕಸಭಾ ಸದಸ್ಯ ರಾಜ್ ಮೋಹನ್ ಉನ್ನಿಥಾನ್ ಅವರು ಐಎಎನ್ಎಸ್ ನೊಂದಿಗೆ ಮಾತನಾಡಿ, "ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಮಂಗಳವಾರ ಮೈಸೂರಿಗೆ ತಲುಪಿ, ಅವತ್ತು ಸಂಜೆ ಅಲ್ಲಿಂದ ನೇರವಾಗಿ ವಯನಾಡ್ಗೆ ಆಗಮಿಸಲಿದ್ದಾರೆ" ಎಂದು ಹೇಳಿದರು.
ಬುಧವಾರ ಕಣ್ಣೂರು ತಲುಪಲಿರುವ ಸೋನಿಯಾ:"ಸೋನಿಯಾ ಗಾಂಧಿ ಬುಧವಾರ ಕಣ್ಣೂರಿಗೆ ತಲುಪಲಿದ್ದು, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಪ್ರಿಯಾಂಕಾ ನಾಮಪತ್ರ ಸಲ್ಲಿಸುವ ಮುನ್ನ ವಯನಾಡ್ ತಲುಪಲಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಮತ್ತು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೂಡ ಅವತ್ತು ವಯನಾಡ್ಗೆ ಬರಲಿದ್ದಾರೆ." ಎಂದು ಉನ್ನಿಥಾನ್ ಮಾಹಿತಿ ನೀಡಿದರು. ಒಂದು ದಶಕದ ನಂತರ ಸೋನಿಯಾ ಗಾಂಧಿ ಅವರು ಕೇರಳಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ.