ನವದೆಹಲಿ: ದೇಶಕ್ಕೆ ಮಧ್ಯಮ ವರ್ಗದವರು ಸಾಕಷ್ಟು ಕೊಡುಗೆ ನೀಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದರು. 78ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ಮಧ್ಯಮ ವರ್ಗದ ಜನರು ಗುಣಮಟ್ಟದ ಜೀವನವನ್ನು ನಿರೀಕ್ಷಿಸುತ್ತಿದ್ದಾರೆ. ಜೀವನ ಸುಲಭಗೊಳಿಸುವ ಅಡಿಯಲ್ಲಿ ಕುಡಿಯುವ ನೀರು, ವಿದ್ಯುತ್, ಆರೋಗ್ಯ, ಶಾಲೆ ಮತ್ತು ಭೂಮಿ ಹಾಗೂ ಆಸ್ತಿಗಳ ರಕ್ಷಣೆಯ ಪ್ರಮುಖ ಧ್ಯೇಯ ಹೊಂದಲಾಗಿದೆ ಎಂದರು.
ಪ್ರತಿಭೆಗಳಿಂದ ಭಾರತದ ವಿನ್ಯಾಸ: ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗುವಂತಹ ಅವಶ್ಯಕತೆ ಇಲ್ಲದಂತಹ ಶಿಕ್ಷಣ ವ್ಯವಸ್ಥೆಯನ್ನು ನಿರ್ಮಾಣ ಮಾಡಲು ಬಯಸುತ್ತೇವೆ. ಮುಂದಿನ ಐದು ವರ್ಷದಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿ 75 ಸಾವಿರ ಹೊಸ ಸೀಟ್ಗಳನ್ನು ಸೃಷ್ಟಿಸಲಾಗುವುದು. ಎಲ್ಲಾ ಉತ್ಪಾದನೆ ಕ್ಷೇತ್ರದಲ್ಲಿ ಭಾರತವು ಬೆಳವಣಿಗೆ ಕಾಣುತ್ತಿದ್ದು, ಅಗತ್ಯ ಗುಣಮಟ್ಟದ ಉತ್ಪನ್ನ ವಿನ್ಯಾಸಕ್ಕೆ ಪ್ರತಿಭೆಗಳನ್ನು ಹೊಂದಿದೆ. ಜಗತ್ತಿಗಾಗಿ ನಮ್ಮ ದೇಶವನ್ನು ವಿನ್ಯಾಸ ಮಾಡುವ ಗುರಿಯನ್ನು ನಾವು ಹೊಂದಬೇಕಿದೆ. ಭಾರತದ ಗುಣಮಟ್ಟ ಅಂತಾರಾಷ್ಟ್ರೀಯ ಮಟ್ಟದಲ್ಲಿರಬೇಕು. ಈ ಗುರಿ ಸಾಧಿಸಲು ಭಾರತವು ಅಗತ್ಯ ಪ್ರತಿಭೆಗಳನ್ನು ಹೊಂದಿದೆ ಎಂದರು.
ವಿಕಸಿತ್ ಭಾರತ್ 2047ರ ಗುರಿ: ವಿಕಸಿತ್ ಭಾರತ 2047ರ ಗುರಿ ಸಾಧಿಸಲು ಸುಧಾರಣೆಗಳು ಅಗತ್ಯವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಹಯೋಗ ಅಗತ್ಯವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಆಡಳಿತ ಸಹಯೋಗ ಉತ್ತೇಜಿಸುವ ಗುರಿಯನ್ನು ನಮ್ಮ ಸರ್ಕಾರ ಹೊಂದಿದೆ. ಗ್ರಾಮ ಮತ್ತು ನಗರದ ಜನಸಂಖ್ಯೆ ಜೀವನ ಉತ್ತಮಗೊಳಿಸಲು ಸರ್ಕಾರದ ಮಧ್ಯಸ್ಥಿಕೆ ಕಾರ್ಯ ವಿಧಾನವನ್ನು ಬಲಪಡಿಸಲಾಗುವುದು.
ವಿಕಸಿತ್ ಭಾರತವನ್ನು ರಾಜ್ಯಗಳ ಅಭಿವೃದ್ಧಿ ಮೂಲಕ ಸಾಕಾರಗೊಳಿಸಬಹುದಾಗಿದೆ. ಅಭಿವೃದ್ಧಿಯು ತಳಮಟ್ಟದಿಂದ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮಗಳವರೆಗೆ ಸಾಗಬೇಕಿದೆ ಎಂದರು.
ಮಹಿಳೆಯರಿಗೆ ಸಬಲತೆಗೆ ಕ್ರಮ: ವೃತ್ತಿನಿರತ ಮಹಿಳೆಯರಿಗೆ 12 ವಾರಗಳಿಂದ 26 ವಾರಗಳ ಪ್ರಸವದ ರಜೆಯನ್ನು ವಿಸ್ತರಿಸಲಾಗಿದೆ. ನಾವು ಮಹಿಳೆಯರನ್ನು ಗೌರವಿಸುವುದರೊಂದಿಗೆ ಅವರ ಅವಶ್ಯಕತೆಗಳಲ್ಲಿ ಸರ್ಕಾರವು ಅಡ್ಡಿಯಾಗದಂತೆ ನಾವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಪ್ರಧಾನಿ ಭರವಸೆ ನೀಡಿದರು.