ನವದೆಹಲಿ: ಕಕ್ಷಿದಾರರಿಗೆ ತ್ವರಿತವಾಗಿ ನ್ಯಾಯ ದೊರಕುವಂತಾಗಲು ನ್ಯಾಯಾಲಯಗಳು ವಿಚಾರಣೆಯನ್ನು ಮುಂದೂಡುವ ಸಂಸ್ಕೃತಿಯಿಂದ ದೂರ ಸರಿಯುವ ಪ್ರಯತ್ನ ಮಾಡಬೇಕಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಭಾನುವಾರ ಹೇಳಿದ್ದಾರೆ. ಜಿಲ್ಲಾ ನ್ಯಾಯಾಂಗದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನ್ಯಾಯಾಲಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪ್ರಕರಣಗಳು ಬಾಕಿ ಇರುವುದು ನಮ್ಮ ಮುಂದಿರುವ ದೊಡ್ಡ ಸವಾಲಾಗಿದೆ ಎಂದರು.
"ನ್ಯಾಯಾಲಯಗಳಲ್ಲಿ ವಿಚಾರಣೆಯನ್ನು ಮುಂದೂಡುವ ಸಂಸ್ಕೃತಿಯನ್ನು ಬದಲಾಯಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಬೇಕಾಗಿದೆ. ದೇಶದ ಎಲ್ಲಾ ನ್ಯಾಯಾಧೀಶರು ನ್ಯಾಯವನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ" ಎಂದು ಅವರು ಹೇಳಿದರು.
ನ್ಯಾಯಾಲಯದ ಪ್ರಕ್ರಿಯೆಗಳಿಂದ ಜನರಲ್ಲಿ ಒತ್ತಡ ಹೆಚ್ಚಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ ಮುರ್ಮು, ಈ ವಿದ್ಯಮಾನವು "ಬ್ಲ್ಯಾಕ್ ಕೋಟ್ ಸಿಂಡ್ರೋಮ್" ಆಗಿದೆ ಎಂದರು. ಈ ಬಗ್ಗೆ ಅಧ್ಯಯನ ನಡೆಯಬೇಕಾಗಿದೆ ಎಂದು ಅವರು ತಿಳಿಸಿದರು. ನ್ಯಾಯಾಂಗದಲ್ಲಿ ಮಹಿಳಾ ಅಧಿಕಾರಿಗಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಅವರು ಸಂತೋಷ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಭಾಗಿಯಾಗಿದ್ದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೂರ್ಯ ಕಾಂತ್ ಮಾತನಾಡಿ, ನ್ಯಾಯದ ಅನ್ವೇಷಣೆಯು ನಿರಂತರ ಪ್ರಯಾಣವಾಗಿದೆ ಮತ್ತು ಇದಕ್ಕೆ ಸಾಮೂಹಿಕ ಸಮರ್ಪಣೆ ಮತ್ತು ಅವಿರತ ಬದ್ಧತೆಯ ಅಗತ್ಯವಿದೆ. ದೇಶದ ಅತ್ಯಂತ ದೂರದ ಭಾಗಗಳಲ್ಲಿನ ಜನರಿಗೂ ನ್ಯಾಯ ಒದಗಿಸುವ ಧ್ಯೇಯದಲ್ಲಿ ಸುಪ್ರೀಂ ಕೋರ್ಟ್ ಆರಂಭದಿಂದಲೂ ದೃಢನಿಶ್ಚಯ ಹೊಂದಿದೆ ಎಂದು ಹೇಳಿದರು.