ನವದೆಹಲಿ:ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಒಟ್ಟು 9 ರಾಜ್ಯಗಳಿಗೆ ನೂತನ ರಾಜ್ಯಪಾಲರು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಲೆಫ್ಟಿನೆಂಟ್ ಗವರ್ನರ್ ಅವರನ್ನು ನೇಮಿಸಿ ಶನಿವಾರ ರಾತ್ರಿ ಆದೇಶ ಹೊರಡಿಸಿದ್ದಾರೆ. ಈ ಪೈಕಿ ಆರು ರಾಜ್ಯಗಳಿಗೆ ನೂತನ ರಾಜ್ಯಪಾಲರು ಮತ್ತು ಮೂರು ರಾಜ್ಯಗಳಿಗೆ ಬೇರೆ ರಾಜ್ಯಗಳ ಹಾಲಿ ರಾಜ್ಯಪಾಲರನ್ನು ನೇಮಿಸಲಾಗಿದೆ.
ನೂತನ ರಾಜ್ಯಪಾಲರಾಗಿ ನೇಮಕಗೊಂಡವರಲ್ಲಿ ಕರ್ನಾಟಕದ ಮಾಜಿ ಸಚಿವ ಮತ್ತು ಬಿಜೆಪಿ ಹಿರಿಯ ನಾಯಕ ಸಿ.ಹೆಚ್.ವಿಜಯಶಂಕರ್ ಕೂಡ ಸೇರಿದ್ದಾರೆ. ಇವರನ್ನು ಮೇಘಾಲಯದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.
ಮಹಾರಾಷ್ಟ್ರ ವಿಧಾನಸಭೆಯ ಮಾಜಿ ಸ್ಪೀಕರ್ ಹರಿಭಾವು ಬಾಗಡೆ ರಾಜಸ್ಥಾನದ ಗವರ್ನರ್ ಆಗಿ ನೇಮಕವಾಗಿದ್ದಾರೆ. ತ್ರಿಪುರಾ ಮಾಜಿ ಡಿಸಿಎಂ ಜಿಷ್ಣು ದೇವ್ ವರ್ಮಾ ತೆಲಂಗಾಣದ ರಾಜ್ಯಪಾಲ ಹುದ್ದೆಯ ಅವಕಾಶ ಪಡೆದಿದ್ದಾರೆ.
ಸಿಕ್ಕಿಂ ರಾಜ್ಯಪಾಲರಾಗಿ ಮಾಜಿ ರಾಜ್ಯಸಭಾ ಸಂಸದ ಓಂ ಪ್ರಕಾಶ್ ಮಥುರಾ, ಜಾರ್ಖಂಡ್ ರಾಜ್ಯಪಾಲರಾಗಿ ಮಾಜಿ ಕೇಂದ್ರ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಮತ್ತು ಛತ್ತೀಸ್ಗಡ ರಾಜ್ಯಪಾಲರಾಗಿ ಅಸ್ಸೋಂನ ಮಾಜಿ ಸಂಸದ ರಮೇನ್ ದೆಕಾ ಅವರನ್ನು ರಾಷ್ಟ್ರಪತಿ ನೇಮಿಸಿದ್ದಾರೆ.
ಮೂವರು ರಾಜ್ಯಪಾಲರ ವರ್ಗಾವಣೆ:ಜಾರ್ಖಂಡ್ನ ಹಾಲಿ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಅವರನ್ನು ಮಹಾರಾಷ್ಟ್ರ ಗವರ್ನರ್ ಆಗಿ ಮತ್ತು ಅಸ್ಸೋಂ ಹಾಲಿ ರಾಜ್ಯಪಾಲ ಗುಲಾಬ್ ಚಂದ್ ಕಠಾರಿಯಾ ಅವರನ್ನು ಪಂಜಾಬ್ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಸಿಕ್ಕಿಂ ಹಾಲಿ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರನ್ನು ಅಸ್ಸೋಂ ಮತ್ತು ಹೆಚ್ಚುವರಿಯಾಗಿ ಮಣಿಪುರಕ್ಕೆ ನೇಮಿಸಲಾಗಿದೆ.
ಪುದುಚೇರಿಯ ಲೆಪ್ಟಿನೆಂಟ್ ಗವರ್ನರ್ ಆಗಿ ನಿವೃತ್ತ ಐಎಎಸ್ ಅಧಿಕಾರಿ ಕೆ.ಕೈಲಾಸ್ನಾಥನ್ ನೇಮಕಗೊಂಡಿದ್ದಾರೆ.