ಕರ್ನಾಟಕ

karnataka

ಕೇಂದ್ರ ಬಜೆಟ್​ ಪೂರ್ವಸಿದ್ಧತೆ: ಅರ್ಥಶಾಸ್ತ್ರಜ್ಞರು, ವಿಷಯ ತಜ್ಞರೊಂದಿಗೆ ಪಿಎಂ ಮೋದಿ ಮಹತ್ವದ ಸಭೆ - Union Budget 2024

By ETV Bharat Karnataka Team

Published : Jul 11, 2024, 6:03 PM IST

ಬಜೆಟ್​ಗೆ ಪೂರ್ವಭಾವಿಯಾಗಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಅರ್ಥಶಾಸ್ತ್ರಜ್ಞರು ಮತ್ತು ವಿಷಯ ತಜ್ಞರೊಂದಿಗೆ ಸಭೆ ನಡೆಸಿದರು.

ಅರ್ಥಶಾಸ್ತ್ರಜ್ಞರು, ವಿಷಯ ತಜ್ಞರೊಂದಿಗೆ ಪಿಎಂ ಮೋದಿ ಸಭೆ
ಅರ್ಥಶಾಸ್ತ್ರಜ್ಞರು, ವಿಷಯ ತಜ್ಞರೊಂದಿಗೆ ಪಿಎಂ ಮೋದಿ ಸಭೆ (ANI)

ನವದೆಹಲಿ: ಕೇಂದ್ರ ಬಜೆಟ್ 2024 ರ ಪೂರ್ವ ಸಿದ್ಧತೆಯ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಅರ್ಥಶಾಸ್ತ್ರಜ್ಞರು ಮತ್ತು ವಿಷಯ ತಜ್ಞರೊಂದಿಗೆ ಸಭೆ ನಡೆಸಿದರು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಸಭೆಯಲ್ಲಿ ಹಾಜರಿದ್ದರು. ಬಜೆಟ್ ಪೂರ್ವ ಸಭೆಯಲ್ಲಿ ನೀತಿ ಆಯೋಗದ ಉಪಾಧ್ಯಕ್ಷ ಸುಮನ್ ಬೆರಿ, ಯೋಜನಾ ಮಂಡಳಿಯ ಇತರ ಸದಸ್ಯರು ಸೇರಿದಂತೆ ಪ್ರಮುಖ ವ್ಯಕ್ತಿಗಳು ಭಾಗವಹಿಸಿದ್ದರು. ಇದೇ ಜುಲೈ 23 ರಂದು ಬಜೆಟ್​ ಮಂಡನೆಯಾಗಲಿದೆ.

ಮುಂಬರುವ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ದಿಕ್ಕು ರೂಪಿಸುವ ನಿಟ್ಟಿನಲ್ಲಿ ಹಲವಾರು ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಇದು ಮೋದಿಯವರ ಮೂರನೇ ಅವಧಿಯ ಮೊದಲ ಪ್ರಮುಖ ಆರ್ಥಿಕ ನಡೆಯಾಗಿರುವುದರಿಂದ ಈ ಬಜೆಟ್ ವಿಶೇಷ ಮಹತ್ವ ಹೊಂದಿದೆ. 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯೊಂದಿಗೆ ಈ ಬಜೆಟ್​ನ ಕಾರ್ಯತಂತ್ರಗಳನ್ನು ರೂಪಿಸುವ ನಿರೀಕ್ಷೆಯಿದೆ.

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಹಣಕಾಸು ಸಚಿವಾಲಯದಲ್ಲಿ 2024 ರ ಜೂನ್ 19 ರಿಂದ ಪ್ರಾರಂಭವಾದ ಬಜೆಟ್ ಪೂರ್ವ ಸಮಾಲೋಚನೆಗಳು ಜುಲೈ 5 ರಂದು ಮುಕ್ತಾಯಗೊಂಡಿವೆ.

ಮುಖಾಮುಖಿ ಸಭೆಗಳಲ್ಲಿ ತಜ್ಞರು ಮತ್ತು ರೈತ ಸಂಘಗಳ ಪ್ರತಿನಿಧಿಗಳು ಮತ್ತು ಕೃಷಿ ಅರ್ಥಶಾಸ್ತ್ರಜ್ಞರು ಸೇರಿದಂತೆ 10 ವಲಯಗಳ 120 ಕ್ಕೂ ಹೆಚ್ಚು ಆಹ್ವಾನಿತರು ಭಾಗವಹಿಸಿದ್ದರು. ಕಾರ್ಮಿಕ ಸಂಘಗಳು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ, ಉದ್ಯೋಗ ಮತ್ತು ಕೌಶಲ್ಯ, ಎಂಎಸ್​ಎಂಇ, ವ್ಯಾಪಾರ ಮತ್ತು ಸೇವೆಗಳು, ಉದ್ಯಮ, ಅರ್ಥಶಾಸ್ತ್ರಜ್ಞರು, ಹಣಕಾಸು ವಲಯ ಮತ್ತು ಬಂಡವಾಳ ಮಾರುಕಟ್ಟೆಗಳು, ಮೂಲಸೌಕರ್ಯ, ಇಂಧನ ಮತ್ತು ನಗರ ವಲಯದ ಪ್ರತಿನಿಧಿಗಳು ಸಭೆಗಳಲ್ಲಿ ಭಾಗವಹಿಸಿದ್ದರು ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, ಹಣಕಾಸು ಕಾರ್ಯದರ್ಶಿ ಮತ್ತು ವೆಚ್ಚ ಕಾರ್ಯದರ್ಶಿ ಡಾ.ಟಿ.ವಿ.ಸೋಮನಾಥನ್, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಜಯ್ ಸೇಠ್, ಡಿಐಪಿಎಎಂ ಕಾರ್ಯದರ್ಶಿ ತುಹಿನ್ ಕೆ ಪಾಂಡೆ, ಹಣಕಾಸು ಸೇವೆಗಳ ಕಾರ್ಯದರ್ಶಿ ವಿವೇಕ್ ಜೋಶಿ, ಕಂದಾಯ ಇಲಾಖೆ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಮನೋಜ್ ಗೋವಿಲ್, ಸಂಬಂಧಪಟ್ಟ ಸಚಿವಾಲಯಗಳ ಕಾರ್ಯದರ್ಶಿಗಳು, ಮುಖ್ಯ ಆರ್ಥಿಕ ಸಲಹೆಗಾರ ಡಾ.ವಿ.ಅನಂತ ನಾಗೇಶ್ವರನ್ ಮತ್ತು ಹಣಕಾಸು ಸಚಿವಾಲಯ ಮತ್ತು ಸಂಬಂಧಪಟ್ಟ ಸಚಿವಾಲಯಗಳ ಹಿರಿಯ ಅಧಿಕಾರಿಗಳು ಸಂಬಂಧಿತ ಸಭೆಗಳಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ : ಜುಲೈ 11ರಂದು ವಿಶ್ವ ಜನಸಂಖ್ಯಾ ದಿನಾಚರಣೆ: ಈ ದಿನದ ಮಹತ್ವವೇನು? - World Population Day

ABOUT THE AUTHOR

...view details