ಲಖನೌ(ಉತ್ತರ ಪ್ರದೇಶ): ಮುಂದಿನ ವರ್ಷದ ಜನವರಿಯಲ್ಲಿ ನಡೆಯಲಿರುವ ಪ್ರಯಾಗರಾಜ್ ಮಹಾಕುಂಭ ಮೇಳಕ್ಕೆ ಆಹ್ವಾನಿಸಲು ಇಂಡೋನೇಷ್ಯಾದಲ್ಲಿ ರೋಡ್ ಶೋ ನಡೆಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ. ಇದಕ್ಕೆ ಪ್ರತಿಪಕ್ಷಗಳು ತಗಾದೆ ತೆಗೆದಿದ್ದು, ಸರ್ಕಾರ ವಿದೇಶಗಳಲ್ಲಿ ರೋಡ್ ಶೋ ನಡೆಸಲು ಕೋಟ್ಯಂತರ ರೂಪಾಯಿ ಪೋಲು ಮಾಡುತ್ತಿದೆ ಎಂದು ಟೀಕಿಸಿವೆ.
2025ರ ಜನವರಿ 13ರಿಂದ ಫೆಬ್ರವರಿ 26ರವರೆಗೆ ಪ್ರಯಾಗರಾಜ್ನಲ್ಲಿ ಮಹಾಕುಂಭ ಮೇಳ ನಡೆಯಲಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಭಾರತ ಹಾಗೂ ವಿದೇಶಗಳ ಪ್ರಮುಖ ನಗರಗಳಲ್ಲಿ ಭವ್ಯ ರೋಡ್ ಶೋಗಳನ್ನು ಆಯೋಜಿಸುವ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದೆ. ಇದಲ್ಲದೇ, ರೋಡ್ ಶೋಗಾಗಿ 220 ವಾಹನಗಳ ಖರೀದಿಗೂ ಒಪ್ಪಿಗೆ ನೀಡಲಾಗಿದೆ.
ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ್ದ ಸಚಿವ ಎ.ಕೆ.ಶರ್ಮಾ, "ಭಾರತದ ನವದೆಹಲಿ, ಮುಂಬೈ, ಪುಣೆ, ಜೈಪುರ, ಹೈದರಾಬಾದ್, ತಿರುವನಂತಪುರ, ಅಹಮದಾಬಾದ್, ಚೆನ್ನೈ, ಕೋಲ್ಕತ್ತಾ, ಬೆಂಗಳೂರು, ಗುವಾಹಟಿ, ಡೆಹ್ರಾಡೂನ್, ಭೋಪಾಲ್, ಚಂಡೀಗಢ ಮತ್ತು ಪಾಟ್ನಾದಲ್ಲಿ ರೋಡ್ ಶೋಗಳನ್ನು ಆಯೋಜಿಸಲಾಗುವುದು. ಇದಲ್ಲದೇ, ನೇಪಾಳ, ಥಾಯ್ಲೆಂಡ್, ಇಂಡೋನೇಷ್ಯಾ ಮತ್ತು ಮಾರಿಷಸ್ ಸೇರಿದಂತೆ ಹಲವು ದೇಶಗಳಲ್ಲಿ ರೋಡ್ ಶೋಗಳನ್ನು ಆಯೋಜಿಸಲಾಗುವುದು. ರೋಡ್ ಶೋಗಳ ಸಂಪೂರ್ಣ ವೆಚ್ಚವನ್ನು ನಗರಾಭಿವೃದ್ಧಿ ಇಲಾಖೆ ಭರಿಸಲಿದೆ. ನಗರಗಳಲ್ಲಿ ಆಯೋಜಿಸುವ ಪ್ರತಿಯೊಂದು ರೋಡ್ ಶೋಗೆ ಸರ್ಕಾರ 20ರಿಂದ 25 ಲಕ್ಷ ರೂ.ವರೆಗೆ ಖರ್ಚು ಮಾಡಲಿದೆ. ಉಳಿದಂತೆ ಎಫ್ಐಸಿಸಿಐ (FICCI) ಹಾಗೂ ಸಿಐಐ (CII) ಗಳನ್ನು ಪಾಲುದಾರರನ್ನಾಗಿ ಮಾಡಲಾಗುವುದು" ಎಂದು ತಿಳಿಸಿದ್ದರು.