ನವದೆಹಲಿ:'ಪ್ರಣಬ್ ಮುಖರ್ಜಿ ಪ್ರಧಾನಿ, ಮನಮೋಹನ್ ಸಿಂಗ್ ಅವರು ರಾಷ್ಟ್ರಪತಿ ಆಗಬೇಕಿತ್ತು'.. ಇದು ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಅವರ ಮಾತು. 2014 ರಲ್ಲಿ ಕಾಂಗ್ರೆಸ್ನ ಹೀನಾಯ ಸೋಲಿನ ಬಗ್ಗೆ ತಾವೇ ಬರೆದ ಪುಸ್ತಕದಲ್ಲಿ ಅಯ್ಯರ್ ಅವರು ಉಲ್ಲೇಖಿಸಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುಪಿಎ-2 ಸರ್ಕಾರದ ಆಡಳಿತವನ್ನು ಪ್ರಣಬ್ ಮುಖರ್ಜಿ ಅವರಿಗೆ ನೀಡಬೇಕಿತ್ತು. ಸಿಂಗ್ ಅವರನ್ನು ರಾಷ್ಟ್ರಪತಿ ಮಾಡಿದ್ದರೆ, ಪಕ್ಷ 2014 ರಲ್ಲಿ ಹೀನಾಯವಾಗಿ ಸೋಲುತ್ತಿರಲಿಲ್ಲ. ಇದು ಪಕ್ಷದ ಅತಿದೊಡ್ಡ ತಪ್ಪು ನಿರ್ಧಾರ ಎಂಬರ್ಥದಲ್ಲಿ ಮಣಿಶಂಕರ್ ಅಯ್ಯರ್ ಅವರು ಹೇಳಿದ್ದಾರೆ.
83 ವರ್ಷದ ಅಯ್ಯರ್ ಅವರು ತಮ್ಮ 'ಎ ಮೇವರಿಕ್ ಇನ್ ಪಾಲಿಟಿಕ್ಸ್' ಪುಸ್ತಕದಲ್ಲಿ ರಾಜಕೀಯ ಪಲ್ಲಟಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ರಾಜಕೀಯದಲ್ಲಿ ತಮ್ಮ ಆರಂಭಿಕ ದಿನಗಳು, ಮಾಜಿ ಪಿಎಂ ನರಸಿಂಹರಾವ್ ಅವರ ಜೊತೆಗಿನ ಒಡನಾಟ, ಕೇಂದ್ರ ಸಚಿವ, ರಾಜ್ಯಸಭಾ ಸದಸ್ಯ ಮತ್ತು ರಾಜಕೀಯ ಜೀವನದ ಕೊನೆಗಾಲವನ್ನು ಅವರು ವಿವರಿಸಿದ್ದಾರೆ.
ಪಕ್ಷಕ್ಕೆ ಮುಳುವಾದ ಸೋನಿಯಾ, ಸಿಂಗ್ ಅನಾರೋಗ್ಯ:2012 ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸತತ 6 ಬಾರಿ ಬೈಪಾಸ್ ಸರ್ಜರಿಗೆ ಒಳಗಾದರು. ಪಕ್ಷದ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಅವರೂ ಅನಾರೋಗ್ಯಕ್ಕೀಡಾದರು. ಇದು ಪಕ್ಷದ ಶಕ್ತಿಯನ್ನು ಕುಗ್ಗಿಸಿತು. 2013 ರಲ್ಲಿ ಎಲ್ಲರೂ, ಚೇತರಿಸಿಕೊಳ್ಳುವಷ್ಟರಲ್ಲಿ ಪಕ್ಷವು ಕೆಟ್ಟ ಸ್ಥಿತಿಗೆ ತಲುಪಿತ್ತು ಎಂದು ಅವರು ಉಲ್ಲೇಖಿಸಿದ್ದಾರೆ.
ಪಕ್ಷದ ದೊಡ್ಡ ಹಿನ್ನಡೆಯೆಂದರೆ, ಅದು ಪ್ರಣಬ್ ಮುಖರ್ಜಿ ಅವರನ್ನು ಪ್ರಧಾನಿಯನ್ನಾಗಿ ಮಾಡದೇ ಇರುವುದು. ದೈಹಿಕವಾಗಿ ಅಸಮರ್ಥರಾಗಿದ್ದ ಸಿಂಗ್ ಅವರನ್ನು ಮತ್ತೆ ಪ್ರಧಾನಿ ಪಟ್ಟದಲ್ಲಿ ಕೂರಿಸಲಾಯಿತು. ಪ್ರಣಬ್ ಅವರನ್ನು ಪ್ರಧಾನಿ ಮಾಡಿ, ಸಿಂಗ್ ರಾಷ್ಟ್ರಪತಿ ಮಾಡಬೇಕಿತ್ತು. ಇದು 2014 ರ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲನ್ನು ತಪ್ಪಿಸಬಹುದಿತ್ತು ಎಂದು ಮೆಲುಕು ಹಾಕಿದ್ದಾರೆ.
ಯುಪಿಎ ಸರ್ಕಾರದ ಮೇಲೆ ಕೇಳಿಬಂದ ಹಗರಣಗಳ ಆರೋಪಗಳು ಮಾಧ್ಯಮಗಳಿಗೆ ಆಹಾರವಾದವು. ಇದರಿಂದ ಪಕ್ಷಕ್ಕೂ ಕೆಟ್ಟ ಹೆಸರು ಬಂದಿತು. ಸೋನಿಯಾ ಮತ್ತು ಸಿಂಗ್ರ ಅನಾರೋಗ್ಯದಿಂದ ಈ ಎಲ್ಲ ಆರೋಪಗಳಿಗೆ ಉತ್ತರ ನೀಡಲು ಸಾಧ್ಯವಾಗಲಿಲ್ಲ ಎಂದು ಅಯ್ಯರ್ ಹೇಳಿದ್ದಾರೆ.
ಅಣ್ಣಾ ಹಜಾರೆ ಹೋರಾಟ:ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ದೊಡ್ಡ ಹೊಡೆತ ನೀಡಿದ್ದು, ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಹೋರಾಟ. ಅಣ್ಣಾ ಅವರ ಹೋರಾಟವು ಸರ್ಕಾರದ ವಿರುದ್ಧ ಜನರಲ್ಲಿ ತೀವ್ರ ಅಸಮಾಧಾನ ಮೂಡಿಸಿತು. ಇದು ಚುನಾವಣೆಯಲ್ಲಿ ದೊಡ್ಡ ನಷ್ಟವನ್ನೇ ಉಂಟು ಮಾಡಿತು ಎಂದು ಕಾರಣ ನೀಡಿದ್ದಾರೆ.
ಗಾಂಧಿ ಕುಟುಂಬವೇ ಕಾರಣ:ಇನ್ನು, ತಮ್ಮ ವೈಯಕ್ತಿಕ ರಾಜಕೀಯ ಜೀವನದ ಬಗ್ಗೆಯೂ ಪ್ರಸ್ತಾಪಿಸಿರುವ ಅವರು, ತಮ್ಮ ರಾಜಕೀಯಕ್ಕೆ ನಾಂದಿ ಹಾಡಿದ್ದೇ ಗಾಂಧಿ ಕುಟುಂಬ. ವಿಪರ್ಯಾಸವೆಂದರೆ, ರಾಜಕೀಯ ಜೀವನ ಅಂತ್ಯಕ್ಕೂ ಆ ಕುಟುಂಬವೇ ಕಾರಣ ಎಂದು ಬಾಂಬ್ ಸಿಡಿಸಿದ್ದಾರೆ.
ಕೇಂದ್ರ ಸಚಿವನಾಗಿ, ವಿದೇಶಾಂಗ ಮಂತ್ರಿಯಾಗಿ ಕಾರ್ಯನಿರ್ವಹಿಸಲು ಗಾಂಧಿ ಕುಟುಂಬವೇ ಕಾರಣ. ಕಾಲಾನಂತರ ನನ್ನ ಮತ್ತು ಆ ಕುಟುಂಬದ ನಡುವಿನ ಬಂಧ ದೂರವಾಯಿತು. ಸೋನಿಯಾ ಅವರನ್ನು ಈವರೆಗೆ ಒಮ್ಮೆಯೂ ಮುಖಾಮುಖಿ ಭೇಟಿಯಾಗಲು ಸಾಧ್ಯವಾಗಿಲ್ಲ. ರಾಹುಲ್ ಗಾಂಧಿ ಒಮ್ಮೆ, ಪ್ರಿಯಾಂಕಾ ಎರಡು ಬಾರಿ ಮಾತ್ರ ಮಾತುಕತೆಗೆ ಸಿಕ್ಕಿದ್ದಾರೆ. ಪ್ರಿಯಾಂಕಾ ಅವರು ಫೋನ್ನಲ್ಲಿ ಮಾತ್ರ ಮಾತನಾಡಲು ಸಿಗುತ್ತಾರೆ ಎಂದು ಅವರು ಪ್ರಸ್ತಾಪಿಸಿದ್ದಾರೆ.
ಮೋದಿಯನ್ನು ಚಾಯ್ವಾಲಾ ಎಂದಿಲ್ಲ:ರಾಜಕೀಯ ಬದ್ಧವೈರಿಯಂತೆ ಕಾಣುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆಯೂ ಪುಸ್ತಕದಲ್ಲಿ ಪ್ರಸ್ತಾಪಿಸಿರುವ ಅಯ್ಯರ್ ಅವರು, ನಾನು ಎಂದಿಗೂ ಮೋದಿಯನ್ನು ಚಾಯ್ವಾಲಾ ಎಂದು ಕರೆದಿಲ್ಲ. ಅವರೇ ಅದನ್ನು ಜನರ ಮುಂದೆ ತಂದರು. ದೇಶದ ಬಗ್ಗೆ ಜ್ಞಾನವಿಲ್ಲದ ವ್ಯಕ್ತಿ ಪ್ರಧಾನಿಯಾಗುವುದು ಸರಿಯಲ್ಲ ಎಂಬುದು ನನ್ನ ಭಾವನೆಯಾಗಿತ್ತು. ಹೀಗಾಗಿ ನಾನು ಅಂದು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಮೋದಿ ಘೋಷಣೆಯಾದಾಗ ತೀವ್ರವಾಗಿ ಖಂಡಿಸಿದ್ದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ದೆಹಲಿ ಚುನಾವಣೆ: ಆಪ್ನಿಂದ ಅಭ್ಯರ್ಥಿಗಳ ಕೊನೆಯ ಪಟ್ಟಿ ಬಿಡುಗಡೆ, ಎಲ್ಲ 70 ಕ್ಷೇತ್ರಗಳಿಗೆ ಸ್ಪರ್ಧೆ