ಪಾಲಿ( ರಾಜಸ್ಥಾನ);ಜಿಲ್ಲೆಯ ಜದನ್‌ನಲ್ಲಿರುವ ದೇಶದ ಏಕೈಕ ಓಂ ಆಕಾರದ ಯೋಗ ಮಂದಿರ ಇಂದು ಉದ್ಘಾಟನೆಗೊಳ್ಳಲಿದೆ. ಮಧ್ಯಾಹ್ನ 12.30ಕ್ಕೆ ಇಲ್ಲಿ ಮೂರ್ತಿ ಪ್ರತಿಷ್ಠಾಪನೆ, ಶಿಖರ ಕಲಶ ಪೂಜೆ, ಧ್ವಜಸ್ತಂಭ ಪ್ರತಿಷ್ಠಾಪನೆ ನಡೆಯಲಿದೆ. ರಾಜಸ್ಥಾನ ಮುಖ್ಯಮಂತ್ರಿ ಭಜನಲಾಲ್ ಶರ್ಮಾ ಸೇರಿದಂತೆ ಹಲವು ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ದೇವಾಲಯವು ದೇವಾಧಿದೇವ ಮಹಾದೇವನಿಗೆ ಸಮರ್ಪಿತವಾಗಿದೆ. ಈ ದೇವಾಲಯದ ವಿಶೇಷತೆ ಏನೆಂದರೆ ಗರ್ಭಗುಡಿಯಲ್ಲಿ ಒಂದೇ ಶಿವಲಿಂಗದಲ್ಲಿ ಹನ್ನೆರಡು ಜ್ಯೋತಿರ್ಲಿಂಗಗಳ ದರ್ಶನವಾಗುವಂತೆ ನಿರ್ಮಾಣ ಮಾಡಲಾಗಿದೆ. ಇದಲ್ಲದೆ, ಮಹಾದೇವನ 1008 ನಾಮಗಳ ಆಧಾರದ ಮೇಲೆ ನಿರ್ಮಾಣ ಮಾಡಲಾಗಿರುವ ಒಂದೇ ಸಂಖ್ಯೆಯ ರೂಪಗಳನ್ನು ಏಕಕಾಲದಲ್ಲಿ ಕಾಣಬಹುದಾಗಿರುವುದು ಮತ್ತೊಂದು ವಿಶೇಷತೆಯಾಗಿದೆ.
ಮಹಾಮಂಡಲೇಶ್ವರ ಸ್ವಾಮಿ ಮಹೇಶ್ವರಾನಂದರ ಮಾರ್ಗದರ್ಶನದಲ್ಲಿ ಯೋಗಾಶ್ರಮ ನಿರ್ಮಿಸಲಾಗಿದೆ. ಫೆಬ್ರವರಿ 10 ರಿಂದಲೇ ಇಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರುತ್ತಿವೆ. 4 ಅಂತಸ್ತಿನ ಕಟ್ಟಡದಲ್ಲಿ ವಾಸ್ತುಶಿಲ್ಪ ಕಲೆಯ ವೈಭವವನ್ನು ನೋಡಬಹುದಾಗಿದೆ. ಈ ಕಟ್ಟಡದ ಒಂದು ಭಾಗವು ಭೂಗತವಾಗಿದೆ. ಬ್ರಹ್ಮಾಂಡದ ಕಲ್ಪನೆಯ ಆಧಾರದ ಮೇಲೆ ನಿರ್ಮಾಣ ಮಾಡಲಾಗಿದೆ. ದೇವಾಲಯಕ್ಕೆ ಆಗಮಿಸುವ ಭಕ್ತರು ಇಲ್ಲಿ 12 ಜ್ಯೋತಿರ್ಲಿಂಗಗಳ ದರ್ಶನ ಮಾಡುವ ಮೂಲಕ ಏಳು ಜನ್ಮಗಳ ಪಾಪಗಳಿಂದ ಮುಕ್ತಿ ಪಡೆಯಬಹುದು ಎಂದು ಆಶ್ರಮದ ಉತ್ತರಾಧಿಕಾರಿ ಅವತಾರಪುರಿ ಮಹಾರಾಜರು ಹೇಳಿದ್ದಾರೆ.
ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಆಗಿರುವ ಪ್ರಮುಖ ಶಿವಲಿಂಗವನ್ನು ಒಡಿಶಾದಿಂದ ತರಲಾಗಿದೆ. ಗರ್ಭಗುಡಿಯ ಗೋಡೆಗಳ ಮೇಲೆ ಸ್ಥಾಪಿಸಲಾದ 1008 ಮೂರ್ತಿಗಳು ಒಂದಕ್ಕೊಂದು ವಿಭಿನ್ನವಾಗಿರಬೇಕು, ಆದ್ದರಿಂದ ಯೋಗಾಶ್ರಮ, ಮಹಾಮಂಡಲೇಶ್ವರ ಸ್ವಾಮಿ ಮಹೇಶ್ವರಾನಂದರ ಪ್ರೇರಣೆಯಿಂದ ಅವುಗಳನ್ನು ಇಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಅವತಾರಪುರಿ ಮಹಾರಾಜರು ಹೇಳಿದ್ದಾರೆ.