ನವದೆಹಲಿ: ಅಮಾನತುಗೊಂಡಿರುವ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ದಿಲ್ಲಿ ಉಚ್ಚ ನ್ಯಾಯಾಲಯವು ಸೋಮವಾರ ದಿಲ್ಲಿ ಪೊಲೀಸರು ಮತ್ತು ಕೇಂದ್ರ ಲೋಕಸೇವಾ ಆಯೋಗಕ್ಕೆ (ಯುಪಿಎಸ್ಸಿ) ನೋಟಿಸ್ ಜಾರಿ ಮಾಡಿದ್ದು, ಸದ್ಯಕ್ಕೆ ಅವರನ್ನು ಬಂಧಿಸದಂತೆ ಪೊಲೀಸರಿಗೆ ಆದೇಶಿಸಿದೆ. ಈ ಮೂಲಕ ಪೂಜಾ ಖೇಡ್ಕರ್ ಅವರಿಗೆ ನ್ಯಾಯಾಲಯ ತುಸು ನಿರಾಳತೆ ನಿಡಿದೆ.
ಜಿಲ್ಲಾ ನ್ಯಾಯಾಲಯವು ತಮಗೆ ಜಾಮೀನು ನೀಡದಿರುವುದನ್ನು ಪ್ರಶ್ನಿಸಿ ಪೂಜಾ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ನಿಗದಿತ ಸಂಖ್ಯೆಗಿಂತ ಹೆಚ್ಚು ಬಾರಿ ಯುಪಿಎಸ್ಸಿ ಪರೀಕ್ಷೆಗೆ ಹಾಜರಾಗಲು ಪೂಜಾ ಖೇಡ್ಕರ್ ತಮ್ಮ ವೈಯಕ್ತಿಕ ಗುರುತಿನ ಮಾಹಿತಿಗಳನ್ನು ತಿರುಚಿದ್ದಾರೆ ಎಂದು ಎಫ್ಐಆರ್ನಲ್ಲಿ ಆರೋಪಿಸಲಾಗಿದೆ.
ವಾದ-ವಿವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್ ಅವರ ನ್ಯಾಯಪೀಠ, ಸದ್ಯ ಈ ವಿಷಯವು ವಿಚಾರಣೆಯಲ್ಲಿರುವಾಗ ಖೇಡ್ಕರ್ ಅವರನ್ನು ಬಂಧಿಸದಂತೆ ಪೊಲೀಸರಿಗೆ ನೀಡಿತು. ಆಕೆಯನ್ನು ತಕ್ಷಣಕ್ಕೆ ಬಂಧಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಅರ್ಜಿಯ ವಿಸ್ತೃತ ವಿಚಾರಣೆಯು ಆಗಸ್ಟ್ 21 ರಂದು ನಡೆಯಲಿದೆ.
ಪೂಜಾ ಖೇಡ್ಕರ್ ವಂಚನೆಯ ಸ್ಕೀಂ ತಯಾರಿಸುವಲ್ಲಿ ಮಾಸ್ಟರ್ ಮೈಂಡ್ ಆಗಿದ್ದಾಳೆ ಮತ್ತು ಇತರರ ಸಹಾಯವಿಲ್ಲದೆ ಈ ವಂಚನೆಯನ್ನು ಎಸಗಲು ಸಾಧ್ಯವಿಲ್ಲ. ಹೀಗಾಗಿ ಆಕೆಯನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವುದು ಅಗತ್ಯವಾಗಿದೆ ಎಂದು ಯುಪಿಎಸ್ಸಿ ವಾದಿಸಿತು.