ಕರ್ನಾಟಕ

karnataka

ETV Bharat / bharat

ಬೆಳಗಾವಿಯ ಕಾಂಗ್ರೆಸ್​ ಬ್ಯಾನರ್​ ನಕ್ಷೆಯಿಂದ ಪಿಒಕೆ ಕಾಣೆ: ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಖಂಡನೆ - CONGRESS BANNER

ಬೆಳಗಾವಿಯಲ್ಲಿ ಕಾಂಗ್ರೆಸ್ ಪ್ರದರ್ಶಿಸಿದ ಬ್ಯಾನರ್​ಗಳು ವಿವಾದ ಸೃಷ್ಟಿಸಿವೆ.

ಬೆಳಗಾವಿಯಲ್ಲಿ ಕಂಡು ಬಂದ ಬ್ಯಾನರ್​ಗಳು
ಬೆಳಗಾವಿಯಲ್ಲಿ ಕಂಡು ಬಂದ ಬ್ಯಾನರ್​ಗಳು (IANS)

By ETV Bharat Karnataka Team

Published : Dec 26, 2024, 3:32 PM IST

ನವದೆಹಲಿ: ಬೆಳಗಾವಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಅಧಿವೇಶನಕ್ಕಾಗಿ ನಗರದಲ್ಲಿ ಅಳವಡಿಸಲಾಗಿರುವ ಭಾರತದ ವಿವಾದಾತ್ಮಕ ನಕಾಶೆ ಹೊಂದಿರುವ ಬ್ಯಾನರ್​ಗಳ ವಿರುದ್ಧ ಬಿಜೆಪಿ ಕಿಡಿ ಕಾರಿದೆ. ಬೆಳಗಾವಿ ನಗರದ ಪ್ರವೇಶದ್ವಾರದ ಬಳಿ ಹಾಕಲಾಗಿರುವ ಸ್ವಾಗತ ಫ್ಲೆಕ್ಸ್​ಗಳಲ್ಲಿ ಮುದ್ರಿಸಲಾದ ಭಾರತದ ನಕಾಶೆಯಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ಅಕ್ಸಾಯ್ ಚಿನ್ ಪ್ರದೇಶಗಳು ಇಲ್ಲದೆ ಇರುವುದು ಸದ್ಯ ವಿವಾದದ ಕೇಂದ್ರ ಬಿಂದುವಾಗಿದೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಮತ್ತು ರಾಜ್ಯಸಭಾ ಸಂಸದ ಸುಧಾಂಶು ತ್ರಿವೇದಿ, ಕಾಂಗ್ರೆಸ್ ವಿಭಜಕ ರಾಜಕೀಯದಲ್ಲಿ ತೊಡಗಿದೆ ಎಂದು ಆರೋಪಿಸಿದರು.

"ಬೆಳಗಾವಿಯಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಿಒಕೆ ಮತ್ತು ಅಕ್ಸಾಯ್ ಚಿನ್ ಇಲ್ಲದ ವಿಕೃತ ನಕ್ಷೆಯನ್ನು ತೋರಿಸುವ ಪೋಸ್ಟರ್​ಗಳನ್ನು ಹಾಕಲಾಗಿದೆ. ಕಾಂಗ್ರೆಸ್​ ಈ ಹಿಂದೆಯೂ ಈ ರೀತಿ ಮಾಡಿದೆ. ಈ ನಕ್ಷೆಗಳನ್ನು ಪ್ರದರ್ಶಿಸುವ ಟ್ವೀಟ್​ಗಳನ್ನು ಸಹ ಅಳಿಸಲಾಗಿದೆ" ಎಂದು ತ್ರಿವೇದಿ ಹೇಳಿದರು.

"ಈ ನಕ್ಷೆಯನ್ನು ಮಹಾತ್ಮ ಗಾಂಧಿಯವರ ಚಿತ್ರದ ಪಕ್ಕದಲ್ಲಿಯೇ ಮುದ್ರಿಸಲಾಗಿದೆ. ಆದರೆ ಮಹಾರಾಣಾ ಪ್ರತಾಪ್, ಛತ್ರಪತಿ ಶಿವಾಜಿ, ರಾಣಿ ಲಕ್ಷ್ಮಿಬಾಯಿ ಮತ್ತು ಗುರು ಗೋವಿಂದ್ ಸಿಂಗ್ ಅವರಂಥ ಮಹಾನ್ ವ್ಯಕ್ತಿಗಳ ತ್ಯಾಗದ ಇತಿಹಾಸ ಹೊಂದಿರುವ ಭಾರತಕ್ಕೆ ಇದು ಅಪಮಾನ ಮಾಡಿದಂತಾಗಿದೆ" ಎಂದು ಅವರು ಹೇಳಿದರು.

ಕಾಂಗ್ರೆಸ್ ಕ್ರಮವನ್ನು ಖಂಡಿಸಿದ ತ್ರಿವೇದಿ, ಕಾಂಗ್ರೆಸ್​ನ ಕ್ರಮಗಳು ದೇಶವನ್ನು ವಿಭಜಿಸುವ ಕನಸು ಕಾಣುವ 'ಭಾರತ ವಿರೋಧಿ ಶಕ್ತಿಗಳೊಂದಿಗೆ' ಹೊಂದಿಕೆಯಾಗುತ್ತವೆ ಎಂದು ಹೇಳಿದರು.

ಡಿಎಂಕೆ ನಾಯಕರು, ಹಿರಿಯ ನಾಯಕ ಶಶಿ ತರೂರ್ ಮತ್ತು ರಾಹುಲ್ ಗಾಂಧಿ ಅವರಂತಹ ಪ್ರಮುಖ ವ್ಯಕ್ತಿಗಳು ಈ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಇದೇ ರೀತಿಯ ಚಿತ್ರಗಳನ್ನು ಶೇರ್ ಮಾಡಿದ್ದನ್ನು ಅವರು ಉಲ್ಲೇಖಿಸಿದರು.

"ಕಾಂಗ್ರೆಸ್ ಪದೇ ಪದೆ ಭಾರತದ ಕೆಲ ಭಾಗಗಳನ್ನು ತಾನು ಪೋಸ್ಟ್ ಮಾಡುವ ನಕಾಶೆಗಳಿಂದ ಏಕೆ ತೆಗೆದುಹಾಕುತ್ತಿದೆ? ಇದು ಯಾವುದೋ ದೊಡ್ಡ ಪಿತೂರಿಯ ಭಾಗವಾಗಿರಬಹುದು" ಎಂದು ಸೂಚಿಸಿ ತ್ರಿವೇದಿ ಕೇಳಿದರು.

"ಜಾರ್ಜ್ ಸೊರೊಸ್ ನ ಆಜ್ಞೆಯ ಮೇರೆಗೆ ಅಥವಾ ಯಾವುದೋ ಭಾರತ ವಿರೋಧಿಗಳ ಕುಮ್ಮಕ್ಕಿನಿಂದ ಇದೆಲ್ಲವನ್ನು ಮಾಡಲಾಗುತ್ತಿದೆಯೇ?" ಎಂದು ಅವರು ಪ್ರಶ್ನಿಸಿದರು. ಕಾಂಗ್ರೆಸ್ ಭಾರತದ ಏಕತೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ ಮತ್ತು ಇಂತಹ ವಿಭಜಕ ತಂತ್ರಗಳ ಮೂಲಕ ಅಧಿಕಾರಕ್ಕೆ ಮರಳಲು ಸಂಚು ರೂಪಿಸುತ್ತಿದೆ ಎಂದು ಅವರು ಆರೋಪಿಸಿದರು.

ಇದನ್ನೂ ಓದಿ : 8 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, ಕೊಲೆ: ಕಾಲಿಗೆ ಗುಂಡು ಹೊಡೆದು ಆರೋಪಿ ಬಂಧನ - RAPE MURDER CASE

ABOUT THE AUTHOR

...view details