ರೋಹ್ತಾಸ್ (ಬಿಹಾರ): ಉದ್ಯೋಗದ ಹೆಸರಲ್ಲಿ ಬಡವರ ಜಮೀನು ಲೂಟಿ ಮಾಡಿದವರ ಬಂಧನಕ್ಕೆ ಕ್ಷಣಗಣನೆ ಆರಂಭವಾಗಿದೆ ಎಂದು ಹೆಸರು ಬಳಸದೇ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ವಿರುದ್ದ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು. ಬಿಹಾರದ ಏಳನೇ ಹಂತದ ಚುನಾವಣೆ ಹಿನ್ನೆಲೆಯಲ್ಲಿ ಕರಕತ್ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಕುಶ್ವಾಹ ಪರವಾಗಿ ಪ್ರಚಾರ ನಡೆಸಿದರು. ಈ ವೇಳೆ, ಸಾರ್ವಜನಿಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
" ಉದ್ಯೋಗದ ಹೆಸರಲ್ಲಿ ಬಿಹಾರದ ಬಡ ಜನರ ಜಮೀನನ್ನು ಲೂಟಿ ಮಾಡಿರುವವರ ಬಂಧನಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೆಲಿಕಾಪ್ಟರ್ ರೈಡ್ ಮುಕ್ತಾಯಗೊಳ್ಳುತ್ತಿದ್ದಂತೆ ಜೈಲಿಗೆ ಹೋಗಲು ರಸ್ತೆ ಸಿದ್ದಗೊಳ್ಳಲಿದೆ. ಬಿಹಾರವನ್ನು ಲೂಟಿ ಮಾಡಿದ ಯಾರೊಬ್ಬರನ್ನೂ ಎನ್‌ಡಿಎ ಸರ್ಕಾರ ಬಿಡೋದಿಲ್ಲ ಇದು ಎನ್‌ಡಿಎ ಮತ್ತು ಮೋದಿ ಸರ್ಕಾರದ ಗ್ಯಾರಂಟಿಯಾಗಿದೆ" ಎಂದು ಹೆಸರು ಬಳಸದೇ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದರು.
ಬಳಿಕ ಕಾಂಗ್ರೆಸ್ ಮೈತ್ರಿ ಕೂಟದ ವಿರುದ್ದ ವಾಗ್ದಾಳಿ ನಡೆಸಿ, "ಇಂಡಿ ಮೈತ್ರಿ ಕೂಟದವರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಏನು ಮಾಡಲು ಹಿಂಜರಿಯುವುದಿಲ್ಲ. ಕಾಂಗ್ರೆಸ್ನ ಮಂತ್ರಿಯೊಬ್ಬರು ಹೇಳುತ್ತಾರೆ ಬಿಹಾರಿಗರಿಗೆ ಪಂಜಾಬ್ನಲ್ಲಿ ಇರಲು ಮತ್ತು ಬರಲು ಬಿಡಲ್ಲ ಎನ್ನುತ್ತಾರೆ. ಮತ್ತೊಂದೆಡೆ ತೆಲಂಗಾಣ, ಪಶ್ಚಿಮ ಬಂಗಾಳ ಸಿಎಂ ಕೂಡ ಅವಮಾನ ಮಾಡಿದ್ದಾರೆ. ಬಿಹಾರದ ಜನರಿಗೆ ಆದಂತಹ ಅನ್ಯಾಯ ಮತ್ತು ಅವಮಾನದ ಬಗ್ಗೆ ಕಾಂಗ್ರೆಸ್ ಆಗಲಿ ಮತ್ತು ಮೈತ್ರಿ ಕೂಟದ ಯಾವೊಬ್ಬ ನಾಯಕರಾಗಲಿ ಧ್ವನಿ ಎತ್ತುತ್ತಿಲ್ಲ".
" ಅಲ್ಲದೇ ಆರ್ಜೆಡಿ ನಾಯಕರಿಗೂ ಈ ಬಗ್ಗೆ ಕಾಂಗ್ರೆಸ್ ಜೊತೆ ಮಾತನಾಡಲು ಧೈರ್ಯವಿಲ್ಲ. ಇವರಿಗೆಲ್ಲ ಬಿಹಾರದ ಗೌರವ, ಮತ್ತು ಜನರ ಬಗ್ಗೆ ಖಾಳಜಿ ಇಲ್ಲ. ಕೇವಲ ಮತಗಳನ್ನು ಸೆಳೆಯಲು ಬಣ್ಣದ ಮಾತುಗಳನ್ನು ಆಡುತ್ತಾರೆ. ಆದರೇ ಇವರ ಮಾತಿಗೆ ಬಿಹಾರಿಗರು ಮರಳಾಗಲ್ಲ" ಎಂದು ಚಾಟಿ ಬೀಸಿದರು.
ಇದನ್ನೂ ಓದಿ:ಜನರನ್ನು ಹೇಗೆ ದಾರಿ ತಪ್ಪಿಸಲಾಗುತ್ತಿದೆ ಎಂಬುದನ್ನು ಮುಂದೊಂದು ದಿನ ಹೇಳುತ್ತೇವೆ: ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ - Rajiv Kumar cast vote