ನವದೆಹಲಿ:ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗೆದ್ದೇ ಗೆಲ್ಲುವ ಭರಪೂರ ವಿಶ್ವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಹೊಸ ಸರ್ಕಾರ ರಚನೆಯ ಬಳಿಕ ಮೊದಲ 100 ದಿನಗಳ ಕ್ರಿಯಾಯೋಜನೆಯ ಬಗ್ಗೆ ಸಚಿವ ಸಂಪುಟದ ಜೊತೆ ಭಾನುವಾರ ಚರ್ಚೆ ನಡೆಸಿದರು. ಜೊತೆಗೆ ಮುಂದಿನ 5 ವರ್ಷಗಳ ಕಾರ್ಯಸೂಚಿ, 'ವಿಕಸಿತ ಭಾರತ-2047'ದ ಬಗ್ಗೆಯೂ ಹಲವು ವಿಚಾರಗಳನ್ನು ಮಂಡಿಸಿದ್ದಾರೆ.
ಈ ಸಭೆಯು 8 ತಾಸುಗಳ ಕಾಲ ನಡೆದಿದ್ದು, ಸಚಿವರು ಕೂಡ ತಮ್ಮ ಇಲಾಖೆಯ ಕಾರ್ಯಸೂಚಿಯನ್ನು ಕೂಡ ಪ್ರಧಾನಿ ಮುಂದೆ ವಿವರಿಸಿದರು ಎಂದು ಮೂಲಗಳು ತಿಳಿಸಿವೆ. ಚುನಾವಣೆಯಲ್ಲಿ ಎನ್ಡಿಎ ಗೆಲುವು ಸಾಧಿಸಿದ ಬಳಿಕ ಮೊದಲ ಸರ್ಕಾರದ 100 ದಿನಗಳ ಕೆಲಸ ಕಾರ್ಯಗಳು ಹೇಗಿರಬೇಕು, ಸರ್ಕಾರದ ಸ್ಪಷ್ಟವಾದ ಅಜೆಂಡಾ ಏನಾಗಿರಬೇಕು ಎಂಬುದನ್ನು ಮೋದಿ ಅವರು ಸಚಿವರಿಗೆ ಸ್ಪಷ್ಟಪಡಿಸಿದ್ದಾರೆ.
ಸಭೆಯಲ್ಲಿ 1 ಗಂಟೆಗೂ ಹೆಚ್ಚು ಕಾಲ ಮಾತನಾಡಿದ ಪ್ರಧಾನಿ ಮೋದಿ, ಅಭಿವೃದ್ಧಿ, ಸಮಾಜದ ಎಲ್ಲಾ ವರ್ಗಗಳ ಕಲ್ಯಾಣಕ್ಕಾಗಿ ತಮ್ಮ ಸರ್ಕಾರ ಕೈಗೊಂಡ ಹಲವಾರು ಕ್ರಮಗಳ ಬಗ್ಗೆ ಹೇಳಿದರು. ಇದನ್ನು ಚುನಾವಣಾ ಪ್ರಚಾರದಲ್ಲಿ ಜನಮಾನಸದಲ್ಲಿ ತಲುಪಿಸಿ, ಇದರ ಆಧಾರದ ಮೇಲೆ ಮತ್ತೆ ಸರ್ಕಾರ ರಚನೆಗೆ ಅವಕಾಶ ಕೋರಬೇಕು ಎಂದು ಸಚಿವರಿಗೆ ತಿಳಿಸಿದ್ದಾಗಿ ಗೊತ್ತಾಗಿದೆ.
ಗೆದ್ದು ಬನ್ನಿ, ಮತ್ತೆ ಭೇಟಿಯಾಗೋಣ:ಸಂಸದರ ಚುನಾವಣಾ ತಯಾರಿ ಮತ್ತು ಆತ್ಮಸ್ಥೈರ್ಯದ ಬಗ್ಗೆ ಮಾತನಾಡಿರುವ ಮೋದಿ, ಹೋಗಿ, ಗೆದ್ದು ಬನ್ನಿ. ಮತ್ತೆ ಇಲ್ಲಿಯೇ ಭೇಟಿಯಾಗೋಣ ಎಂದು ಹೇಳುವ ಮೂಲಕ ಹುರಿದುಂಬಿಸಿದ್ದಾರೆ. ವಿನಾಕಾರಣ ಏನೇನೋ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಬೇಡಿ. ಡೀಪ್ಫೇಕ್ ತಂತ್ರಜ್ಞಾನದಿಂದಲೂ ಎಚ್ಚರಿಕೆ ವಹಿಸಿ ಎಂದು ಸಲಹೆ ನೀಡಿದ್ದಾರೆ.