ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿರುವ ಶೇರ್-ಎ-ಕಾಶ್ಮೀರ್ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ (SKICC)ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಶುಕ್ರವಾರ 10ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.
ಈ ವರ್ಷದ ಯೋಗ ದಿನಾಚರಣೆಯ ಈವೆಂಟ್ ಯುವ ಮನಸ್ಸು ಮತ್ತು ದೇಹದ ಮೇಲೆ ಯೋಗದ ಆಳವಾದ ಪ್ರಭಾವವನ್ನು ಒತ್ತಿ ಹೇಳುತ್ತದೆ. ಈ ಆಚರಣೆಯು ಯೋಗದ ಅಭ್ಯಾಸದಲ್ಲಿ ಸಾವಿರಾರು ಜನರನ್ನು ಒಂದುಗೂಡಿಸುವ ಗುರಿಯನ್ನು ಹೊಂದಿದೆ. ಜಾಗತಿಕ ಮಟ್ಟದಲ್ಲಿ ಆರೋಗ್ಯ ಮತ್ತು ಕ್ಷೇಮವನ್ನು ಉತ್ತೇಜಿಸುತ್ತದೆ.
ಪ್ರಧಾನಿ ನರೇಂದ್ರ ಮೋದಿ ಮಾತು:ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ''ಈ ವರ್ಷ ಭಾರತದಲ್ಲಿ ಫ್ರಾನ್ಸ್‌ನ 101 ವರ್ಷದ ಮಹಿಳಾ ಯೋಗ ಶಿಕ್ಷಕಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರು ಭಾರತಕ್ಕೆ ಬಂದಿರಲಿಲ್ಲ. ಆದರೆ, ಯೋಗದ ಬಗ್ಗೆ ಜಾಗೃತಿ ಮೂಡಿಸಲು ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದರು. ಇಂದು ಪ್ರಪಂಚದಾದ್ಯಂತದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳು ಮತ್ತು ಸಂಸ್ಥೆಗಳಲ್ಲಿ ಯೋಗದ ಕುರಿತು ಸಂಶೋಧನೆಗಳನ್ನು ಮಾಡಲಾಗುತ್ತಿದೆ. ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಲಾಗುತ್ತಿದೆ. ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆ ಪೋಷಿಸುವಲ್ಲಿ ಯೋಗವು ಮಹತ್ವದ ಪಾತ್ರವಹಿಸುತ್ತದೆ" ಎಂದು ತಿಳಿಸಿದರು.
ಜಮ್ಮು ಮತ್ತು ಕಾಶ್ಮೀರದ ಯುಟಿಯ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಆಯುಷ್ ಸಚಿವಾಲಯದ ಕೇಂದ್ರ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವ ಪ್ರತಾಪ್ರಾವ್ ಗಣಪತರಾವ್ ಜಾಧವ್ ಇತರರು ಪ್ರಧಾನಿ ನೇತೃತ್ವದ 10ನೇ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.