ನವದೆಹಲಿ: ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ ಲೋಕಸಭೆ ಕಲಾಪದಲ್ಲಿ ಉತ್ತರ ನೀಡಲಿದ್ದಾರೆ. ಅಗ್ನಿವೀರ್, ನೀಟ್, ನೆಟ್ ಪರೀಕ್ಷಾ ಅಕ್ರಮಗಳು, ಹೊಸ ಅಪರಾಧ ಕಾನೂನುಗಳ ಜಾರಿ ಸೇರಿದಂತೆ ಇತ್ತೀಚಿನ ಬೆಳವಣಿಗೆಗಳಲ್ಲಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಳ್ಳುವುದರ ಜೊತೆಗೆ ಪ್ರತಿಪಕ್ಷಗಳ ನಾಯಕರ ಟೀಕೆಗಳಿಗೂ ಅವರು ಉತ್ತರಿಸುವ ನಿರೀಕ್ಷೆ ಇದೆ.
ಸೋಮವಾರ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ತಮ್ಮ 100 ನಿಮಿಷಗಳ ಭಾಷಣದಲ್ಲಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದರು. ಧರ್ಮದೊಂದಿಗೆ ರಾಜಕೀಯ ಬೆರೆಸುವುದು, ರೈತರನ್ನು ನಿರ್ಲಕ್ಷಿಸುವುದು, ನೋಟು ಅಮಾನ್ಯೀಕರಣ, ಜಿಎಸ್‌ಟಿ ಮತ್ತು ಅಗ್ನಿಪಥ್‌ನಂತಹ ದೋಷಪೂರಿತ ನೀತಿಗಳ ಕುರಿತು ಎನ್‌ಡಿಎ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.
ರಾಹುಲ್ ಭಾಷಣದ ಮಧ್ಯೆ ಪ್ರಧಾನಿ ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್ ಸೇರಿ ಬಿಜೆಪಿ ನಾಯಕರು ಎದ್ದು ನಿಂತು ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೂ ರಾಹುಲ್ ತಮ್ಮ ಭಾಷಣ ಮುಂದುವರೆಸಿ ಟೀಕಾಪ್ರಹಾರ ಮಾಡಿದ್ದರು. ಪ್ರಧಾನಿ ಮೋದಿ ಇಂದು ಈ ಎಲ್ಲ ವಿಚಾರಗಳನ್ನು ಪ್ರಸ್ತಾಪಿಸಿ ತಿರುಗೇಟು ನೀಡುವ ಸಾಧ್ಯತೆ ದಟ್ಟವಾಗಿದೆ.