ನವದೆಹಲಿ: ಲೋಕಸಭೆಯಲ್ಲಿ ಸಂಸತ್ ಅಧಿವೇಶನವನ್ನು ಮುಂದೂಡಿದ ನಂತರ, ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿ ಪ್ರತಿಪಕ್ಷಗಳ ನಾಯಕರೊಂದಿಗೆ ಶುಕ್ರವಾರ ಅನೌಪಚಾರಿಕ 'ಚಾಯ್ ಪೇ ಚರ್ಚಾ' ಸಭೆ ನಡೆಯಿತು. ಈ ವೇಳೆ ಉಭಯ ನಾಯಕರು ಆತ್ಮೀಯವಾಗಿ ಶುಭಾಶಯ ಕೋರಿದರು. ರಾಹುಲ್ ಗಾಂಧಿ ಅವರು ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರನ್ನು ಉಕ್ರೇನ್‌ನಲ್ಲಿನ ಪರಿಸ್ಥಿತಿಯ ಬಗ್ಗೆ ಕೇಳಿದರು. ಇದಕ್ಕೆ ರಕ್ಷಣಾ ಸಚಿವರು ಪ್ರತಿಕ್ರಿಯಿಸಿ, ಭಾರತವು ಅದನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದರು.
ಲೋಕಸಭೆಯ ಕಲಾಪವನ್ನು ಶುಕ್ರವಾರ (ಆಗಸ್ಟ್ 9) ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಕಳೆದ ತಿಂಗಳು ಜುಲೈ 22ರಿಂದ ಆರಂಭವಾದ ಈ ಅಧಿವೇಶನದ ಕಲಾಪಗಳು ಆಗಸ್ಟ್ 12ರವರೆಗೆ ನಡೆಯಬೇಕಿತ್ತು. ಆದರೆ, ಶುಕ್ರವಾರವೇ ಮುಕ್ತಾಯಗೊಂಡಿದೆ. ಈ ಸಂದರ್ಭದಲ್ಲಿ ಲೋಕಸಭೆಯ ಸ್ಪೀಕರ್ ಅವರು ಪ್ರಧಾನಿ, ಸಂಸದೀಯ ವ್ಯವಹಾರಗಳ ಸಚಿವರು, ವಿರೋಧ ಪಕ್ಷದ ನಾಯಕರು, ವಿವಿಧ ಪಕ್ಷಗಳ ನಾಯಕರು ಮತ್ತು ಸಂಸದರಿಗೆ ಅಧಿವೇಶನದಲ್ಲಿ ಸದನದ ಕಲಾಪಗಳು ಸುಗಮವಾಗಿ ನಡೆಯಲು ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
'ಚಾಯ್ ಪೇ ಚರ್ಚಾ' ಸಭೆಯಲ್ಲಿ ಭಾಗವಹಿಸಿದ ಉಳಿದ ನಾಯಕರು ಯಾರು?: ಸಂಸತ್ತಿನ ಅಧಿವೇಶನವನ್ನು ಮುಂದೂಡಿದ ನಂತರ, ಅನೌಪಚಾರಿಕ 'ಚಾಯ್ ಪೇ ಚರ್ಚಾ' ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಅನೇಕ ದೊಡ್ಡ ನಾಯಕರು ಉಪಸ್ಥಿತರಿದ್ದರು.