ರಾಂಚಿ: ಲೋಕಸಭಾ ಚುನಾವಣೆಗೆ ಸಜ್ಜಾಗಿರುವ ಬಿಜೆಪಿ ತನ್ನ ಮೊದಲ ಲೋಕಸಭಾ ಚುನಾವಣಾ ಪ್ರಚಾರ ಸಮಾವೇಶವನ್ನು ಬಿಹಾರದ ಬೆಟ್ಟಿಯಾದಿಂದ ಆರಂಭಿಸಲು ಸಜ್ಜಾಗಿದೆ. ಜಿಲ್ಲೆಯ ಪಶ್ಚಿಮ ಚಂಪಾರಣ್ನ ಬೆಟ್ಟಿಯಾದಲ್ಲಿ ಆಯೋಜಿಸಲಾಗಿರುವ ಬಿಜೆಪಿ ಬೃಹತ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ. ಫೆಬ್ರವರಿ 4ರಂದು ನಡೆಯಲಿರುವ ಈ ಸಮಾವೇಶದಲ್ಲಿ ಸಿಎಂ ನೀತಿಶ್ ಕುಮಾರ್ ಕೂಡ ವೇದಿಕೆ ಹಂಚಿಕೊಳ್ಳಲಿದ್ದಾರೆ.
ವೇದಿಕೆ ಮೇಲೆ ಶಕ್ತಿ ಪ್ರದರ್ಶನ;ರಾಜ್ಯದಲ್ಲಿ ಎನ್ಡಿಎ ಸರ್ಕಾರ ಮತ್ತೊಮ್ಮೆ ರಚನೆಯಾದ ಬಳಿಕ ಪ್ರಧಾನಿ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದಾರೆ. ಮಹಾಘಟಬಂಧನ್ ತೊರೆದು ಎನ್ಡಿಎ ಬೆಂಬಲ ಪಡೆದು 9ನೇ ಬಾರಿಗೆ ಸಿಎಂ ಆಗಿರುವ ನಿತೀಶ್ ಕುಮಾರ್ ಕೂಡ ಈ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಈ ಮೂಲಕ ಎನ್ಡಿಎ ಸೇರಿದ ಬಳಿಕ ಪ್ರಧಾನಿ ಮೋದಿ ಜೊತೆಗೆ ಮೊದಲ ಬಾರಿಗೆ ಅವರು ಕಾಣಿಸಿಕೊಳ್ಳಲಿದ್ದಾರೆ.
ಸಮಾವೇಶದಲ್ಲಿ ಪ್ರಧಾನ ಮಂತ್ರಿ ಅನೇಕ ಸರ್ಕಾರಿ ಯೋಜನೆಗೆ ಶಂಕು ಸ್ಥಾಪನೆ ಮಾಡಲಿದ್ದು, ಸುಮಾರು 19 ಸಾವಿರ ಕೋಟಿ ರೂ. ಯೋಜನೆ ಘೋಷಣೆ ಮಾಡಲಿದ್ದಾರೆ. ಜಾರ್ಖಂಡ್ ಸಿಂದ್ರಿಯಲ್ಲಿ ರಸಗೊಬ್ಬರ ಫ್ಯಾಕ್ಟರಿ ಉದ್ಘಾಟಿಸಲಿರುವ ಅವರು, ಮಧ್ಯಾಹ್ನ 1.30ಕ್ಕೆ ಬಿಹಾರದ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
ಕಾರ್ಯಕ್ರಮದ ಭರದ ಸಿದ್ಧತೆಯಲ್ಲಿ ಬಿಜೆಪಿ: ಜನವರಿ 22ರಂದು ಅಯೋಧ್ಯೆಯಲ್ಲಿ ಬಾಲರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಬಿಹಾರಕ್ಕೆ ಭೇಟಿ ನೀಡುತ್ತಿದ್ದಾರೆ. ಪ್ರಾಣ ಪ್ರತಿಷ್ಠಾಪನೆ ಬಳಿಕ ಅವರು ಇಲ್ಲಿಗೆ ಬರುತ್ತಿರುವುದು ಸಂತಸದ ವಿಚಾರವಾಗಿದೆ. ಫೆಬ್ರವರಿ 4 ಜಿಲ್ಲೆಗೆ ಐತಿಹಾಸಿಕ ದಿನವಾಗಿರಲಿದೆ. ಇಡೀ ಉತ್ತರ ಬಿಹಾರವೂ 19 ಸಾವಿರ ಕೋಟಿ ರೂ.ಗಳ ಉಡುಗೊರೆಯನ್ನು ಪಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಜೊತೆಗೆ ಸಿಎಂ ನಿತೀಶ್ ಕುಮಾರ್ ಕೂಡ ವೇದಿಕೆ ಹಂಚಿಕೊಳ್ಳಲಿದ್ದು, ಉಪ ಮುಖ್ಯಮಂತ್ರಿ ಸಮರ್ಥ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಕೂಡ ಭಾಗಿಯಾಗಲಿದ್ದಾರೆ ಎಂದು ಬಿಜೆಪಿ ಸಂಸದ ಡಾ ಸಂಜಯ್ ಜೈಸ್ವಾಲ್ ತಿಳಿಸಿದ್ದಾರೆ.
ಎನ್ಡಿಎ ಸರ್ಕಾರ ರಚನೆ ಬಳಿಕ ಪ್ರಧಾನಿ ಮೊದಲ ಕಾರ್ಯಕ್ರಮ: ಬಿಜೆಪಿ ಲೋಕಸಭಾ ಚುನಾವಣೆಗೆ ಸಜ್ಜಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಅನೇಕ ಸಮಾವೇಶಗಳು ನಿಗದಿಯಾಗಿವೆ. ಈ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗಿಯಾಗಲಿದ್ದಾರೆ. ಈ ಸಮಾವೇಶದ ಸಿದ್ಧತೆಯನ್ನು ಪಕ್ಷ ನಡೆಸಿದೆ. ಬಿಹಾರ ಸಮಾವೇಶದ ಮೂಲಕ ಬಿಜೆಪಿಯ ಲೋಕಸಭಾ ಚುನಾವಣೆ ಪ್ರಚಾರ ಆರಂಭವಾಗಲಿದೆ.
ಪ್ರಧಾನಿ ಭಾಗಿಯಾಗುವ ಹಿನ್ನೆಲೆ ಬೆಟ್ಟಿಯಾ ಜಿಲ್ಲಾ ಮ್ಯಾಜಿಸ್ಟ್ರೇಟ್ ದಿನೇಶ್ ಕುಮಾರ್ ರೈ, ಎಸ್ಪಿ ಅಮರ್ಕೇಶ್ ಡಿ ಮೇಲ್ವಿಚಾರಣೆಯಲ್ಲಿ ಬಿಗಿ ಬಂದೋಬಸ್ತ್ ಪರಿಶೀಲಿಸಲಾಗುತ್ತಿದೆ.
ಇದನ್ನೂ ಓದಿ: 9ನೇ ಬಾರಿಗೆ ಸಿಎಂ ಆಗಿ ನಿತೀಶ್ಕುಮಾರ್ ಪ್ರಮಾಣ; ಬಿಜೆಪಿಯ ಇಬ್ಬರಿಗೆ ಡಿಸಿಎಂ ಸ್ಥಾನ