ಮುಜಾಫರ್ಪುರ್: ನೆರೆಯ ದೇಶ ಪಾಕಿಸ್ತಾನವೂ ಪರಮಾಣು ಬಾಂಬ್ಗಳನ್ನು ಹೊಂದಿದೆ, ಅದು ಬಳೆ ತೊಟ್ಟು ಕುಳಿತಿಲ್ಲ ಎಂಬ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಹೇಳಿಕೆಗೆ ಪ್ರಧಾನಿ ಮೋದಿ ತಿರುಗೇಟು ನೀಡಿದ್ದಾರೆ.
ಸೋಮವಾರ (ಇಂದು) ಬಿಹಾರದ ಮುಜಾಫರ್ಪುರದಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, INDIA ಮೈತ್ರಿ ಕೂಟದ ನಾಯಕರು ಪಾಕಿಸ್ತಾನದ ಪರಮಾಣು ಶಕ್ತಿಗೆ ಹೆದರುತ್ತಿದ್ದಾರೆ. ಮೈತ್ರಿಕೂಟದ ನಾಯಕ ಹೇಳುತ್ತಾರೆ.. ಪಾಕಿಸ್ತಾನ ಬಳಿಯೂ ಪರಮಾಣು ಬಾಂಬ್ ಇವೆ, ಅದು ಬಳೆ ತೊಟ್ಟು ಕುಳಿತಿಲ್ಲ ಎಂದು. ಪಾಕ್ ಬಳೆ ತೊಟ್ಟು ಕುಳಿತಿಲ್ಲವೆಂದರೆ ನಾವು ತೊಡಿಸುತ್ತೇವೆ ಎಂದು ವ್ಯಂಗ್ಯವಾಡಿದರು. ಆದರೆ ನನಗೆ ತಿಳಿದ ಮಾಹಿತಿ ಪ್ರಕಾರ ಸದ್ಯ ಪಾಕ್ ಬಳಿ ಆಹಾರ ಧಾನ್ಯಗಳು ಇಲ್ಲ, ವಿದ್ಯುತ್ ಇಲ್ಲ. ಅಷ್ಟೇ ಅಲ್ಲ, ಅಗತ್ಯ ಪ್ರಮಾಣದ ಬಳೆ ಪೂರೈಕೆಯೂ ಇಲ್ಲದ ಹಂತಕ್ಕೆ ತಲುಪಿದೆ ಎಂದು ಲೇವಡಿ ಮಾಡಿದರು.
ಮುಂದುವರೆದು ಮಾತನಾಡಿ, ಪಾಕಿಸ್ತಾನದ ಪರಮಾಣು ಶಕ್ತಿಗೆ INDIA ಕೂಟದ ನಾಯಕರು ಹೆದರುತ್ತಿದ್ದಾರೆ. ದೇಶದ ಪ್ರಜೆಗಳು ದುರ್ಬಲ, ಹೇಡಿತನ ಮತ್ತು ಅಸ್ಥಿರ ಸರ್ಕಾರವನ್ನು ಎಂದಿಗೂ ಬಯಸಲ್ಲ. ವಿಪಕ್ಷ ನಾಯಕರು ಮುಂಬೈ ದಾಳಿಯಲ್ಲಿ ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ನೀಡುತ್ತಾರೆ, ಸರ್ಜಿಕಲ್ ದಾಳಿಯ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಾರೆ. ಇಂತಹ ಸ್ವಾರ್ಥಿಗಳು ರಾಷ್ಟ್ರದ ರಕ್ಷಣೆಗಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಹುದೇ? ಆಂತರಿಕ ನೆಲೆ ಇಲ್ಲದ ಇಂತಹ ಪಕ್ಷಗಳು ಭಾರತವನ್ನು ಬಲಿಷ್ಠಗೊಳಿಸಬಹುದೇ? ಎಂದು ವಾಗ್ದಾಳಿ ನಡೆಸಿದರು.
ಹಿಂದಿನ ಸರ್ಕಾರಗಳು ನಕ್ಸಲಿಸಂ ಅನ್ನು ಪೋಷಿಸುತ್ತಿದ್ದವು: ಮುಜಾಫರ್‌ಪುರ ಮತ್ತು ಬಿಹಾರ ದಶಕಗಳಿಂದ ನಕ್ಸಲಿಸಂನಿಂದ ನಲುಗಿ ಹೋಗಿದ್ದವು. ಹಿಂದಿನ ಸರ್ಕಾರಗಳು ನಕ್ಸಲಿಸಂ ಅನ್ನು ಪೋಷಿಸಿದ್ದವು. ಆದರೆ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಕಾನೂನು ಸುವ್ಯವಸ್ಥೆಯನ್ನು ಮತ್ತೆ ಹಳಿಗೆ ತಂದು ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ಇದನ್ನೂ ಓದಿ:ಬಿಜೆಪಿಯ ದಿಲೀಪ್ ಘೋಷ್ ವಿರುದ್ದ ಟಿಎಂಸಿ ಭಾರಿ ಪ್ರತಿಭಟನೆ: ಭದ್ರತಾ ಸಿಬ್ಬಂದಿ ಕಾರು ಧ್ವಂಸ - TMC accused of attacking Dilip