ಕನ್ಯಾಕುಮಾರಿ (ತಮಿಳುನಾಡು): ಚುನಾವಣಾ ಪ್ರಚಾರ ಮುಗಿಸಿ ಗುರುವಾರ ಸಂಜೆಯಿಂದ ಧ್ಯಾನಕ್ಕೆ ಕುಳಿತಿರುವ ಮೋದಿ ಅವರು ಇಂದು ಅಂತಿಮ ದಿನದ ಧ್ಯಾನದಲ್ಲಿ ಮಗ್ನರಾಗಿದ್ದಾರೆ. ಇಲ್ಲಿನ ವಿವೇಕಾನಂದ ರಾಕ್ ಮೆಮೋರಿಯಲ್ನಲ್ಲಿ ಧ್ಯಾನ ಮಗ್ನರಾಗಿರುವ ಅವರು ಇಂದು ಬೆಳಗ್ಗೆ ಸೂರ್ಯ ಅರ್ಘ್ಯವನ್ನು ಅರ್ಪಿಸಿ, ಮತ್ತೆ ಧ್ಯಾನದಲ್ಲಿ ತಲ್ಲೀನರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರು ಮುಂಜಾನೆ ಸೂರ್ಯನಿಗೆ ಅರ್ಘವನ್ನು ಅರ್ಪಿಸಿದ್ದಾರೆ. ಸೂರ್ಯೋದಯ ಸಂದರ್ಭದಲ್ಲಿ ಸಣ್ಣ ಚೊಂಬಿನಲ್ಲಿ ಸಮುದ್ರದ ನೀರನ್ನು ಹಿಡಿದು ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿದರು. ಈ ಮೂಲಕ ಸಾಂಪ್ರದಾಯಿಕವಾಗಿ ಸರ್ವಶಕ್ತನ ರೂಪಕವಾಗಿರುವ ಸೂರ್ಯನ ಆರಾಧನ ಅಭ್ಯಾಸ ನಡೆಸಿದರು. ಇದಾದ ಬಳಿಕ ಜಪ ಮಾಲೆ ಹಿಡಿದು ಮತ್ತೆ ಅವರು ಧ್ಯಾನದಲ್ಲಿ ಮುಳುಗಿದರು ಎಂದು ತಿಳಿಸಿದ್ದಾರೆ.