ನವದೆಹಲಿ:21ನೇ ಆಸಿಯಾನ್-ಭಾರತ ಶೃಂಗಸಭೆ ಮತ್ತು 19ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಲಾವೋಸ್ ದೇಶದ ಪ್ರವಾಸಕ್ಕೆ ಇಂದು ಬೆಳಗ್ಗೆ ತೆರಳಿದ್ದಾರೆ.
ಲಾವೋಸ್ನ ಪ್ರಧಾನಿ ಸೋನೆಕ್ಸೆ ಸಿಫಾಂಡೋನ್ ಅವರ ಆಹ್ವಾನದ ಮೇರೆಗೆ ಎರಡು ದಿನಗಳ ಭೇಟಿಗಾಗಿ ವಿಯೆಂಟಿಯಾನ್‌ಗೆ ಪ್ರಧಾನಿ ಮೋದಿ ತೆರಳಿದ್ದಾರೆ.
ಬುಧವಾರ ಪ್ರಧಾನಿ ಮೋದಿಯವರ ಲಾವೋಸ್ ಭೇಟಿಯ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಜೈದೀಪ್ ಮಜುಂದಾರ್, "ಪ್ರಧಾನಿ ಮೋದಿ ಅವರು ಲಾವೋ ಪಿಡಿಆರ್‌ನಲ್ಲಿರುವ ವಿಯೆಂಟಿಯಾನ್‌ಗೆ 21 ನೇ ಆಸಿಯಾನ್-ಭಾರತ ಶೃಂಗಸಭೆ ಮತ್ತು 19 ನೇ ಪೂರ್ವ ಏಷ್ಯಾ ಶೃಂಗಸಭೆಗಾಗಿ ಲಾವೊ ಪಿಡಿಆರ್ ಪ್ರಧಾನಿ ಸೋನೆಕ್ಸೆ ಸಿಫಾಂಡೋನ್ ಆಹ್ವಾನದ ಮೇರೆಗೆ ಪ್ರಯಾಣಿಸಲಿದ್ದಾರೆ. ಅಕ್ಟೋಬರ್ 10 ಮತ್ತು 11 ರಂದು ಅವರ ಭೇಟಿ ನಡೆಯಲಿದೆ. ಇದು ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿಯವರ ಹತ್ತನೇ ಹಾಜರಾತಿಯಾಗಿದೆ" ಎಂದು ತಿಳಿಸಿದ್ದರು.
ಪಿಎಂ ಮೋದಿ ಪೋಸ್ಟ್: "ಇಂದು, ನಾನು 21ನೇ ಆಸಿಯಾನ್-ಭಾರತ ಮತ್ತು 19ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನ ಮಂತ್ರಿ ಶ್ರೀ ಸೋನೆಕ್ಸೆ ಸಿಫಾಂಡೋನ್ ಅವರ ಆಹ್ವಾನದ ಮೇರೆಗೆ ವಿಯೆಂಟಿಯಾನ್, ಲಾವೊ ಪಿಡಿಆರ್ಗೆ ಹೊರಟಿದ್ದೇನೆ. ಈ ವರ್ಷ ನಾವು ನಮ್ಮ ಆಕ್ಟ್ ಈಸ್ಟ್ ನೀತಿಯ ದಶಕವನ್ನು ಗುರುತಿಸುತ್ತಿದ್ದೇವೆ. ನಮ್ಮ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯಲ್ಲಿನ ಪ್ರಗತಿಯನ್ನು ಪರಿಶೀಲಿಸಲು ಮತ್ತು ನಮ್ಮ ಸಹಕಾರದ ಭವಿಷ್ಯದ ದಿಕ್ಕನ್ನು ರೂಪಿಸಲು ನಾನು ಆಸಿಯಾನ್ ನಾಯಕರೊಂದಿಗೆ ಸಂವಾದ ನಡೆಸುತ್ತೇನೆ. ಪೂರ್ವ ಏಷ್ಯಾ ಶೃಂಗಸಭೆಯು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯ ಸವಾಲುಗಳ ಕುರಿತು ಚರ್ಚಿಸಲು ಅವಕಾಶ ನೀಡಲಿದೆ".
"ನಾವು ಲಾವೊ ಪಿಡಿಆರ್ ಸೇರಿದಂತೆ, ಈ ಪ್ರದೇಶದೊಂದಿಗೆ ನಿಕಟ ಸಾಂಸ್ಕೃತಿಕ ಮತ್ತು ನಾಗರಿಕ ಸಂಬಂಧಗಳನ್ನು ಹಂಚಿಕೊಳ್ಳುತ್ತೇವೆ. ಇದು ಬೌದ್ಧಧರ್ಮ ಮತ್ತು ರಾಮಾಯಣದ ಹಂಚಿಕೆಯ ಪರಂಪರೆಯಿಂದ ಸಮೃದ್ಧವಾಗಿದೆ. ನಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಲಾವೊ ಪಿಡಿಆರ್ ನಾಯಕತ್ವದೊಂದಿಗಿನ ನನ್ನ ಸಭೆಗಳನ್ನು ನಾನು ಎದುರು ನೋಡುತ್ತಿದ್ದೇನೆ. ಈ ಭೇಟಿಯು ಆಸಿಯಾನ್ ದೇಶಗಳೊಂದಿಗೆ ನಮ್ಮ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ ಎಂಬ ವಿಶ್ವಾಸ ನನಗಿದೆ" ಎಂದು ಪ್ರಧಾನಿ ಮೋದಿ ಅವರು ಪೋಸ್ಟ್ ಹಾಕಿದ್ದಾರೆ.
ಇದನ್ನೂ ಓದಿ:ರತನ್ ಟಾಟಾ ಅವರೊಂದಿಗಿನ ಅಸಂಖ್ಯಾತ ಸಂವಾದಗಳಿಂದ ನನ್ನ ಮನಸ್ಸು ತುಂಬಿದೆ: ಪ್ರಧಾನಿ ಮೋದಿ