ನವದೆಹಲಿ:ಕಾರ್ಯನಿರ್ವಹಣೆ, ಸುಧಾರಣೆ, ಪರಿವರ್ತನೆ ಮತ್ತು ಮಾಹಿತಿ ಎಂಬ ನಾಲ್ಕು ಅಂಶಗಳ ಮಂತ್ರದೊಂದಿಗೆ ಅಧಿಕಾರಿಗಳು ಮತ್ತು ಸಚಿವರುಗಳು ಕಾರ್ಯ ನಿರ್ವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಬುಧವಾರ ಅಧಿಕಾರಿಗಳು ಮತ್ತು ಸಚಿವರೊಂದಿಗೆ ಸರ್ಕಾರದ ಕಾರ್ಯ ವೈಖರಿ ಕುರಿತು ಪ್ರಗತಿ ಪರಿಶೀಲನೆಯ ಸುದೀರ್ಘ ಸಭೆ ನಡೆಸಿದ ಅವರು, ಈ ವೇಳೆ ಶ್ರಮವಿಲ್ಲದೇ ಕಾರ್ಯ ನಿರ್ವಹಿಸುವಂತೆ ಸಹೋದ್ಯೋಗಿಗಳು ಹಾಗೂ ಅಧಿಕಾರಿಗಳಿಗೆ ಸಲಹೆ ನೀಡಿದರು.
ಸುಷ್ಮಾ ಸ್ವರಾಜ್ ಭವನ್ನಲ್ಲಿ ಸಚಿವರೊಂದಿಗೆ ಐದು ಗಂಟೆಗಳ ಕಾಲ ಸಭೆ ನಡೆಸಿದ ಅವರು, ಇದೇ ಮೊದಲ ಬಾರಿಗೆ ತಮ್ಮ ಕ್ಯಾಬಿನೆಟ್ ಸೇರಿದಂತೆ ಹೊಸ ಸಚಿವರು, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಚನೆಗಳನ್ನು ನೀಡಿದರು. ಸರ್ಕಾರದ ಕಾರ್ಯವೈಖರಿ, ಸಾಧನೆ ಮತ್ತು ಪ್ರಚಾರ, ಉದ್ದೇಶ, ಕಲ್ಯಾಣದ ಕ್ರಮ ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಅವರು ಸಹೊದ್ಯೋಗಿಗಳೊಂದಿಗೆ ಚರ್ಚಿಸಿದರು. ಇದೇ ವೇಳೆ, ಪ್ರಧಾನಿ ಮೋದಿ ಅವರು ಸಚಿವರುಗಳು ಜನರೊಂದಿಗೆ ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕ ಸಾಧಿಸಬೇಕು. ಈ ಮೂಲಕ ಸರ್ಕಾರವೂ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂಬ ಸಂದೇಶವನ್ನು ಸಾರಬೇಕು ಎಂದು ಸೂಚನೆ ನೀಡಿದರು.
ಮೂಲಗಳ ಪ್ರಕಾರ ಮೋದಿ 3.0 ಸರ್ಕಾರ 100 ದಿನ ಪೂರೈಸಿದ್ದು, ಸಂಬಂಧಪಟ್ಟ ಸಚಿವಾಲಯಗಳಲ್ಲಿ 10 ಪ್ರಮುಖ ನಿರ್ಧಾರಗಳನ್ನು ಕೈಗೊಂಡು ಅವುಗಳ ಮಾಹಿತಿಗಳನ್ನು ನೀಡಿದರು. ಇವುಗಳ ಬಗ್ಗೆ ಪ್ರಚಾರವನ್ನು ನಡೆಸುವಂತೆ ಸೂಚಿಸಿದ ಅವರು, ಸರ್ಕಾರ ನಿರ್ಧಾರಗಳನ್ನು ವೇಗವಾಗಿ ಮತ್ತು ಉತ್ತಮ ಸಂವಹನ ನಡೆಸುವಂತೆ ನಿರ್ದೇಶನ ಕೊಟ್ಟರು.