ಪತ್ತನಂತಿಟ್ಟ (ಕೇರಳ):ಪ್ರಸಿದ್ಧ ಅಯ್ಯಪ್ಪಸ್ವಾಮಿ ದೇಗುಲಕ್ಕೆ ವಿವಿಧ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಪ್ರತಿವರ್ಷ ಸಂಕ್ರಾಂತಿ ಹಬ್ಬದಂದು ಕಾಣಿಸಿಕೊಳ್ಳುವ 'ಮಕರಜ್ಯೋತಿ'ಯನ್ನು ಕಣ್ತುಂಬಿಕೊಂಡರು. ಮಕರವಿಳಕ್ಕು ಎಂದು ಕರೆಯಲಾಗುವ ಉತ್ಸವದಲ್ಲಿ ಶರಣಂ ಅಯ್ಯಪ್ಪ ಘೋಷಣೆ ಮೊಳಗಿತು.
ಮಕರವಿಳಕ್ಕು ಉತ್ಸವದಲ್ಲಿ 50 ಸಾವಿರ ಭಕ್ತರಿಗೆ ಅವಕಾಶ ಮಾಡಿಕೊಡಲಾಗಿತ್ತು. ಎರಡು ತಿಂಗಳ ವಾರ್ಷಿಕ ತೀರ್ಥಯಾತ್ರೆ ಹಿನ್ನೆಲೆಯಲ್ಲಿ ಅಯ್ಯಪ್ಪ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಲು ಯಾತ್ರಾರ್ಥಿಗಳ ದಂಡೇ ಸೇರಿತ್ತು. ಗಂಟೆಗಳ ಕಾಲ ಸಾಲುಗಟ್ಟಿ ಜನರು ನಿಂತು ಸ್ವಾಮಿಯ ದರ್ಶನ ಮಾಡಿಕೊಂಡರು.
ಇರುಮುಡಿ ಹೊತ್ತ ಅಯ್ಯಪ್ಪನ ಭಕ್ತರು ದೇವಾಲಯದ ಆವರಣ ಮತ್ತು ಇತರಡೆಗಳಲ್ಲಿ ಮಕರಜ್ಯೋತಿಯ ದರ್ಶನಕ್ಕಾಗಿ ಕಾದು ನಿಂತಿದ್ದರು. ಸಂಜೆ 6.43 ರ ಸುಮಾರಿಗೆ ಪೊನ್ನಂಬಲಮೇಡು ಕಾಡಿನೊಳಗಿನಿಂದ ದಿವ್ಯಜ್ಯೋತಿ ಪ್ರಜ್ವಲಿಸಿತು. ಇದನ್ನು ಕಂಡು ಭಕ್ತರು ಕೃತಾರ್ಥರಾದರು. ಇದಕ್ಕೂ ಮೊದಲು ಪತ್ತನಂತಿಟ್ಟದ ಪಂದಳಂ ಅರಮನೆಯಿಂದ ತರಲಾದ ತಿರುವಾಭರಣ (ಪವಿತ್ರ ಆಭರಣಗಳು)ಗಳಿಂದ ಸ್ವಾಮಿಯ ಮೂರ್ತಿಯನ್ನು ಅಲಂಕರಿಸಲಾಯಿತು.