ಹೈದರಾಬಾದ್:ಫೋನ್ ಕದ್ದಾಲಿಕೆ, ಕೆಲವು ಕಂಪ್ಯೂಟರ್ಗಳು ಮತ್ತು ಅಧಿಕೃತ ಡೇಟಾವನ್ನು ನಾಶಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಪೊಲೀಸರು ಮತ್ತಿಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಶನಿವಾರ ಬಂಧಿಸಿದ್ದಾರೆ. ಹೆಚ್ಚುವರಿ ಡಿಸಿಪಿ ತಿರುಪತಣ್ಣ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಎನ್.ಭುಜಂಗರಾವ್ ಬಂಧಿತರು.
ಬಂಧಿತ ಇಬ್ಬರು ಪೊಲೀಸ್ ಅಧಿಕಾರಿಗಳು ಈ ಹಿಂದೆ ಕ್ರಮವಾಗಿ ವಿಶೇಷ ಇಂಟೆಲಿಜೆನ್ಸ್ ಬ್ಯೂರೋ (ಎಸ್‌ಐಬಿ) ಮತ್ತು ಗುಪ್ತಚರ ಇಲಾಖೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಕೆಲಸ ಮಾಡಿದ್ದರು. ಹಿಂದಿನ ಬಿಆರ್‌ಎಸ್ ಸರ್ಕಾರದ ಅವಧಿಯಲ್ಲಿ ವಿವಿಧ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಂದ ಗುಪ್ತಚರ ಮಾಹಿತಿಯನ್ನು ಅಳಿಸಿಹಾಕಿದ ಆರೋಪದಲ್ಲಿ ಹಾಗೂ ಆಪಾದಿತ ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಬಂಧಿತರಾಗಿರುವ ಅಮಾನತುಗೊಂಡ ಡಿಎಸ್‌ಪಿ ಡಿ.ಪ್ರಣೀತ್ ರಾವ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ವಿಚಾರಣೆಯ ವೇಳೆ ಇಬ್ಬರು ಪೊಲೀಸ್ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡ ಬಗ್ಗೆ ಒಪ್ಪಿಕೊಂಡಿದ್ದಾರೆ. ಖಾಸಗಿ ವ್ಯಕ್ತಿಗಳ ಮೇಲೆ ನಿಗಾ ಇಡುವ ಸಂಚು, ಫೋನ್ ಕದ್ದಾಲಿಕೆಯಂತಹ ಸಂಚಿನಲ್ಲಿ ಭಾಗಿಯಾಗಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಜೊತೆಗೆ ಈಗಾಗಲೇ ಬಂಧಿತರಾಗಿರುವ ವಿಶೇಷ ತನಿಖಾ ದಳದ (ಎಸ್‌ಐಬಿ) ಡಿಎಸ್‌ಪಿ ಆಗಿದ್ದ ಡಿ.ಪ್ರಣೀತ್ ಕುಮಾರ್ ಅಲಿಯಾಸ್ ಪ್ರಣೀತ್ ರಾವ್ ಮತ್ತು ಇತರ ಆರೋಪಿಗಳ ಜೊತೆಗೆ ಸಂಪರ್ಕ ಹೊಂದಿದ್ದಾಗಿ ತಿಳಿಸಿದ್ದಾರೆ. ಹೆಚ್ಚಿನ ವಿಚಾರಣೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.