ನವದೆಹಲಿ: ಬಾಲ್ಯವಿವಾಹ ನಿಷೇಧ ಕಾಯ್ದೆಯನ್ನು ಯಾವುದೇ ವೈಯಕ್ತಿಕ ಕಾನೂನಿನಡಿ ಸಂಪ್ರದಾಯಗಳ ಹೆಸರಿನಲ್ಲಿ ದುರ್ಬಲಗೊಳಿಸಲು ಸಾಧ್ಯವಿಲ್ಲ ಮತ್ತು ಬಾಲ್ಯ ವಿವಾಹಗಳು ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ವ್ಯಕ್ತಿಯ ಸ್ವಾತಂತ್ರ್ಯವನ್ನು ಹರಣ ಮಾಡುತ್ತವೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ.ಪರ್ಡಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠವು ದೇಶದಲ್ಲಿ ಬಾಲ್ಯ ವಿವಾಹಗಳನ್ನು ತಡೆಗಟ್ಟುವ ಕಾನೂನಿನ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಆದಾಗ್ಯೂ, ವೈಯಕ್ತಿಕ ಕಾನೂನುಗಳ ಮೇಲೆ ಬಾಲ್ಯ ವಿವಾಹ ನಿಷೇಧ ಕಾಯ್ದೆ (ಪಿಸಿಎಂಎ) ಮೇಲುಗೈ ಸಾಧಿಸುತ್ತದೆಯೇ ಎಂಬ ವಿಷಯವು ಸಂಸತ್ತಿನಲ್ಲಿ ಪರಿಗಣನೆಗಾಗಿ ಬಾಕಿ ಇದೆ ಎಂಬುದನ್ನು ನ್ಯಾಯಪೀಠ ಇದೇ ಸಂದರ್ಭದಲ್ಲಿ ಉಲ್ಲೇಖಿಸಿದೆ. ವೈಯಕ್ತಿಕ ಕಾನೂನುಗಳಿಗಿಂತ ಬಾಲ್ಯ ವಿವಾಹ ನಿಷೇಧ ಕಾಯ್ದೆಯೇ ಮೇಲ್ಮಟ್ಟದ್ದು ಎಂದು ಪರಿಗಣಿಸುವಂತೆ ಕೇಂದ್ರವು ಸುಪ್ರೀಂ ಕೋರ್ಟ್ಗೆ ಒತ್ತಾಯಿಸಿತ್ತು ಎಂಬುದು ಇಲ್ಲಿ ಗಮನಾರ್ಹ.
ಪ್ರಸ್ತುತ ತೀರ್ಪಿನಲ್ಲಿ ಬಹಳ ವ್ಯಾಪಕವಾದ ಸಮಾಜಶಾಸ್ತ್ರೀಯ ವಿಶ್ಲೇಷಣೆಯನ್ನು ಮಾಡಲಾಗಿದೆ ಎಂದು ಸಿಜೆಐ ಎತ್ತಿ ತೋರಿಸಿದರು.
"ಪಿಸಿಎಂಎ ಬಾಲ್ಯ ವಿವಾಹಗಳನ್ನು ತಡೆಗಟ್ಟುವ ಕಾನೂನಾಗಿದೆ. ಇದು ಅಲ್ಪ ವಯಸ್ಸಿನ ಮಗುವಿನ ವಿವಾಹದ ದೊಡ್ಡ ಸಾಮಾಜಿಕ ಅಸ್ವಸ್ಥತೆಯನ್ನು ತಡೆಗಟ್ಟುವುದು ಮಾತ್ರವಲ್ಲದೆ, ಇದು ಆಯ್ಕೆಯ ಹಕ್ಕುಗಳ ಉಲ್ಲಂಘನೆಯನ್ನು ತಡೆಗಟ್ಟುವ ಉದ್ದೇಶಗಳನ್ನು ಸಹ ಹೊಂದಿದೆ. ಬಾಲ್ಯ ವಿವಾಹಗಳು ಮಗು ಪ್ರಬುದ್ಧನಾಗುವ ಮೊದಲು ಸಂಗಾತಿಯ ಆಯ್ಕೆ ಮತ್ತು ಜೀವನ ಮಾರ್ಗಗಳನ್ನು ಕಸಿದುಕೊಳ್ಳುತ್ತದೆ" ಎಂದು ಸಿಜೆಐ ಹೇಳಿದರು.