ಕರ್ನಾಟಕ

karnataka

ETV Bharat / bharat

ಅಯೋಧ್ಯೆಯಲ್ಲಿ ಭೂಮಿಗೆ ಹೆಚ್ಚಿದ ಬೇಡಿಕೆ; ಖರೀದಿಗೆ ಅನಿವಾಸಿ ಭಾರತೀಯರ ಒಲವು

ರಾಮ ಮಂದಿರ ನಿರ್ಮಾಣವಾದ ಬಳಿಕ ಅಯೋಧ್ಯೆಯಲ್ಲಿ ಭೂಮಿ ಖರೀದಿಸಲು ಅನೇಕ ಎನ್​ಆರ್​​ಐಗಳು ಒಲವು ತೋರಿಸುತ್ತಿದ್ದಾರೆ.

http://10.10.50.85:6060/reg-lowres/02-February-2024/ayodhya_0202newsroom_1706846978_985.jpg
http://10.10.50.85:6060/reg-lowres/02-February-2024/ayodhya_0202newsroom_1706846978_985.jpg

By ETV Bharat Karnataka Team

Published : Feb 2, 2024, 10:50 AM IST

ಲಕ್ನೋ(ಉತ್ತರ ಪ್ರದೇಶ): ಬಾಲಕ್‌ರಾಮನ ಪ್ರತಿಷ್ಠಾಪನೆಯ ಬಳಿಕ ಅಯೋಧ್ಯೆಯಲ್ಲಿ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಅದರಲ್ಲೂ ಅನಿವಾಸಿ ಭಾರತೀಯರು (ಎನ್​ಆರ್​ಐ) ರಾಮ ಎಲ್ಲಿದ್ದಾನೋ ಅಲ್ಲೇ ಮನೆ ಎಂದು ಪವಿತ್ರ ಭೂಮಿಯಲ್ಲಿ ನಿವೇಶನ ಖರೀದಿಸಲು ಮುಂದಾಗುತ್ತಿದ್ದಾರೆ.

ಕಳೆದ ತಿಂಗಳಷ್ಟೇ ಬಾಲಿವುಡ್​ನ ಹಿರಿಯ ನಟ ಅಮಿತಾಬ್​​ ಬಚ್ಚನ್​ ಅಯೋಧ್ಯೆಯಲ್ಲಿ ಭೂಮಿ ಖರೀದಿಸುವ ಮೂಲಕ ಸುದ್ದಿಯಾಗಿದ್ದರು. ಇದೀಗ ವಿದೇಶದಲ್ಲಿ ನೆಲೆಸಿರುವ ಭಾರತೀಯರು ಭೂಮಿ ಖರೀದಿಗೆ ಒಲವು ತೋರಿಸುತ್ತಿದ್ದು, ಅಯೋಧ್ಯಾ ಅಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಲಾಗುತ್ತಿದೆ.

ಥಾಯ್ಲೆಂಡ್​ನಲ್ಲಿರುವ ಎನ್​ಆರ್​ಐಯೊಬ್ಬರು ಅಯೋಧ್ಯೆಯಲ್ಲಿ 5 ಎಕರೆ ಭೂಮಿ ಖರೀದಿಗಾಗಿ ಅಯೋಧ್ಯಾ ಅಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಹಾಕಿದ್ದಾರೆ. ಅಷ್ಟೇ ಅಲ್ಲ, ಈ ಹಿಂದೆ ಮೆಕ್ಸಿಕೋ, ದಕ್ಷಿಣ ಕೊರಿಯಾ ಮತ್ತು ಶ್ರೀಲಂಕಾದಿಂದ ಅಯೋಧ್ಯೆಗೆ ಭೇಟಿ ನೀಡಿದ ಎನ್​ಆರ್​ಐಗಳೂ ಕೂಡಾ ಖರೀದಿ ಆಯ್ಕೆ ಕುರಿತು ಪರಿಶೀಲಿಸಿದ್ದರು. ಜಾಗತಿಕ ಸ್ಥಳವಾಗಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಮೂಲ ಸೌಕರ್ಯ ಅಭಿವೃದ್ಧಿ ಜೊತೆಗೆ ಅಯೋಧ್ಯಾ ನಗರದ ಅಭಿವೃದ್ಧಿಗೂ ಸರ್ಕಾರ ಮುಂದಾಗಿರುವುದು ಈ ಬೇಡಿಕೆ ಹೆಚ್ಚಳಕ್ಕೆ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದ (ಎಡಿಎ) ಕಾರ್ಯದರ್ಶಿ ಸತ್ಯೇಂದ್ರ ಸಿಂಗ್ ಈ ಕುರಿತು​ ಮಾತನಾಡಿ, ಥಾಯ್ಲೆಂಡ್​ನಿಂದ ಬಂದಿದ್ದ ಎನ್​ಆರ್​ಐಗಳ ಗುಂಪು ಐದು ಎಕರೆ ಜಾಗ ಖರೀದಿಸಲು ಕೇಳಿದ್ದಾರೆ. ಈ ಕುರಿತ ಅರ್ಜಿಯನ್ನು ನಾವು ಗೃಹ ಮತ್ತು ಅಭಿವೃದ್ಧಿ ಮಂಡಳಿಗೆ ವರ್ಗಾಯಿಸಿದ್ದೇವೆ ಎಂದು ಹೇಳಿದರು.

ನಗರದೊಳಗೆ ಭೂಮಿ ಸಿಗುವುದು ಸದ್ಯ ಕಷ್ಟಸಾಧ್ಯ. ಹೆಚ್ಚು ಎಕರೆ ಪ್ರದೇಶದ ಭೂಮಿ ಹುಡುಕುತ್ತಿರುವವರು ಆವಾಸ್ ವಿಕಾಸ್ ಪರಿಷತ್‌ನಿಂದ ಅಭಿವೃದ್ಧಿಪಡಿಸುತ್ತಿರುವ 1,407 ಎಕರೆ ಗ್ರೀನ್‌ಫೀಲ್ಡ್ ಟೌನ್‌ಶಿಪ್ ನವ್ಯ ಅಯೋಧ್ಯೆಯಲ್ಲಿ ಭೂಮಿ ಖರೀದಿಸಬಹುದಾಗಿದೆ. ಭೂಮಿ ಖರೀದಿಸಲು ಆಸಕ್ತಿ ತೋರುತ್ತಿರುವ ಕಂಪನಿ, ಪಕ್ಷ ಮತ್ತು ವ್ಯಕ್ತಿಗಳ ದಾಖಲೆಗಳನ್ನು ಸಂಗ್ರಹಿಸಿದ್ದು, ಸಂಬಂಧಿತ ಯೋಜನೆ ಜಾರಿಗೆ ಬರುವಂತೆ ಕಾಯುವಂತೆ ತಿಳಿಸಿದ್ದೇವೆ. ಈ ಸಂಬಂಧ ನಮ್ಮ ಅಧಿಕಾರಿಗಳು ಅವರ ಜೊತೆಗೆ ಸಂಪರ್ಕದಲ್ಲಿದ್ದು, ನಿಯಮ ಮತ್ತು ಮಾರ್ಗಸೂಚಿ ಪ್ರಕಾರ ಹಂಚಿಕೆ ಮಾಡಲಾಗುತ್ತದೆ ಎಂದು ಆವಾಸ್​ ವಿಕಾಸ್​ ಪರಿಷತ್​​​​ನ ಸೂಪರಿಟೆಂಡೆಂಟ್​​​ ಇಂಜಿನಿಯರ್​ ಪಿ.ಕೆ.ಸಿಂಗ್​ ತಿಳಿಸಿದ್ದಾರೆ.

ಶ್ರೀಲಂಕಾ ಮತ್ತು ಥಾಯ್ಲೆಂಡ್​ನಿಂದಲೂ ಕೂಡ ಎನ್​ಆರ್​ಐಗಳು ಅರ್ಜಿ ಸಲ್ಲಿಸಿದ್ದು, ಅಭಿವೃದ್ಧಿ ಪ್ರಾಧಿಕಾರ ಅವಕಾಶ ನೀಡುತ್ತಿದೆ. ಖಾಸಗಿ ಕಂಪನಿಗಳು ಮತ್ತು ರಿಯಲ್ ಎಸ್ಟೇಟ್ ಏಜೆಂಟ್‌ಗಳು ಸಕ್ರಿಯರಾಗಿದ್ದು, ಇವರಿಗಿಂತ ಹೆಚ್ಚಾಗಿ ಎನ್​ಆರ್​ಐಗಳು ಆಸಕ್ತಿ ತೋರುತ್ತಿದ್ದಾರೆ. ಯಾವುದೇ ದೇಶದಿಂದ ಸಲ್ಲಿಕೆಯಾಗುವ ಮನವಿಗಳನ್ನು ಕೇಂದ್ರ ಸರ್ಕಾರದ ಮೂಲಕ ರವಾನಿಸಲಾಗುತ್ತದೆ. ರಾಯಭಾರಿ ಕಚೇರಿಗಳ ಮೂಲಕವೂ ಅಧಿಕೃತ ಪತ್ರಗಳನ್ನು ನೀಡಲು ಕೇಳಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.(ಐಎಎನ್​ಎಸ್​​)

ಇದನ್ನೂ ಓದಿ:ಅಯೋಧ್ಯೆ ಶ್ರೀರಾಮನ ದರ್ಶನಕ್ಕೆ ಲಖನೌದಿಂದ 350 ಮುಸ್ಲಿಮರಿಂದ 6 ದಿನಗಳ ಪಾದಯಾತ್ರೆ

ABOUT THE AUTHOR

...view details