ಪಟಿಯಾಲ:ಇಲ್ಲಿನ ರಾಜೀವ್ ಗಾಂಧಿ ಕಾನೂನು ವಿಶ್ವವಿದ್ಯಾನಿಲಯದ ಉಪಕುಲಪತಿಗಳ ವಿರುದ್ಧ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ತಾರಕಕ್ಕೇರಿದೆ. ಉಪಕುಲಪತಿಗಳು ಯಾವುದೇ ಸೂಚನೆ ನೀಡದೇ ವಿದ್ಯಾರ್ಥಿನಿಯರ ಕೊಠಡಿಗೆ ಹೋಗುವ ಮೂಲಕ ಅವರ ಖಾಸಗಿತನವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಈ ಪ್ರತಿಭಟನೆ ನಡೆಸಲಾಗುತ್ತಿದೆ.
ಪ್ರತಿಭಟನಾ ಬಿಸಿ ತಮಗೆ ತಲುಪುತ್ತಿದ್ದಂತೆ ವಿವಿ ಉಪಕುಲಪತಿ ಜೈ ಶಂಕರ್ ಸಿಂಗ್ ಇಂದು ಮಾಧ್ಯಮದ ಮುಂದೆ ಬಂದು ಆಗಮಿಸಿ ಸ್ಪಷ್ಟನೆ ನೀಡಿದ್ದಾರೆ. ವಿದ್ಯಾರ್ಥಿಗಳಿಗೆ ಏನೇ ಸಮಸ್ಯೆಗಳಿದ್ದರೂ ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಭರವಸೆ ಕೂಡ ನೀಡಿದ್ದಾರೆ.
ಆರೋಪದ ಬಗ್ಗೆ ವಿಸಿ ಹೇಳಿದ್ದೇನು?''ನಾವು ಯಾವುದೇ ತಪ್ಪು ದಾರಿ ತುಳಿದಿಲ್ಲ. ಈ ಬಾರಿ ಪ್ರವೇಶಕ್ಕೆ ವಿದ್ಯಾರ್ಥಿನಿಯ ಸಂಖ್ಯೆ ಹೆಚ್ಚಾಗಿದ್ದು, ಇದರಿಂದ ಒಂದೇ ಕೊಠಡಿಯಲ್ಲಿ ಒಬ್ಬ ವಿದ್ಯಾರ್ಥಿನಿ ವಾಸಿಸುವ ಹಾಸ್ಟೆಲ್ ಕೊಠಡಿಯಲ್ಲಿ ಇಬ್ಬರನ್ನು ಸೇರಿಸಲಾಗಿದೆ. ತಮ್ಮ ಪುಸ್ತಕ, ಬಟ್ಟೆ ಬರೆ ಹಾಗೂ ವಸ್ತುಗಳನ್ನಿಟ್ಟುಕೊಳ್ಳಲು ತೊಂದರೆಯಾಗುತ್ತಿದೆ ಎಂಬ ದೂರುಗಳು ಬಂದಿದ್ದವು. ಇದರಿಂದ ನಮಗೆ ಓದಲು ಸಮಸ್ಯೆಯಾಗುತ್ತಿದೆ ಎಂದು ಕೆಲವು ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದರು. ಅಲ್ಲದೇ ಸಮಸ್ಯೆ ಬಗೆಹಿಸುವಂತೆ ತಮ್ಮಲ್ಲಿ ಮನವಿ ಕೂಡ ಮಾಡಿಕೊಂಡಿದ್ದರು. ಹೀಗಾಗಿ ನಾನು ಮಹಿಳಾ ಮುಖ್ಯ ವಾರ್ಡನ್ ಜೊತೆಗೆ ದೂರು ನೀಡಿದ ವಿದ್ಯಾರ್ಥಿನಿಯರ ಕೊಠಡಿಗೆ ಭೇಟಿ ನೀಡಿದ್ದೆ. ಆದರೆ, ನಾನು ಅವರ ಬಟ್ಟೆ ಬಗ್ಗೆ ಕಾಮೆಂಟ್ ಮಾಡಿಲ್ಲ. ಅಲ್ಲದೇ ಅವರ ಕೊಠಡಿ ಹೊರತು ಬೇರೆ ಯಾವ ಕೊಠಡಿಗೂ ಹೋಗಿಲ್ಲ. ಬಟ್ಟೆಯ ವಿಷಯಕ್ಕೆ ಬಂದರೆ 17 ರಿಂದ 20 ಅಥವಾ 22 ವರ್ಷದೊಳಗಿನ ವಿದ್ಯಾರ್ಥಿನಿಯರು, ವಿದ್ಯಾರ್ಥಿಗಳು ಯಾವುದೇ ರೀತಿಯ ಬಟ್ಟೆಗಳನ್ನು ಧರಿಸಬಹುದು. ಈ ವಿಷಯದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಈವರೆಗೂ ವಿದ್ಯಾರ್ಥಿಗಳ ವೈಯಕ್ತಿಕ ಜೀವನದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರ ಇಚ್ಛೆಯಂತೆ ಬದುಕಬಹುದು. ಈ ಚರ್ಚೆ ಇಷ್ಟಕ್ಕೆ ಬಗೆಹರಿಯಲಿ. ಏನೇ ಸಮಸ್ಯೆ ಇದ್ದರೂ ಪರಿಹರಿಸಲು ಪ್ರಯತ್ನಿಸುವೆ'' ಎಂದಿದ್ದಾರೆ.