ನವದೆಹಲಿ:ದೇಶದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಮುಸಲ್ಮಾನ್ ವಕ್ಫ್(ತಿದ್ದುಪಡಿ) ವಿಧೇಯಕ-2024 ಇದೇ ತಿಂಗಳ 25ರಿಂದ ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡನೆಗೆ ಬರಲಿದೆ ಎಂದು ಲೋಕಸಭೆ ಸೆಕ್ರೆಟರಿಯೇಟ್ ಬುಧವಾರ ಬಿಡುಗಡೆ ಮಾಡಿದ ಮಾಹಿತಿಯಲ್ಲಿದೆ.
ಈ ಹಿಂದಿನ ಅಧಿವೇಶನದಲ್ಲಿ ಆಗಸ್ಟ್ 8 ರಂದು ಸದನದ ಮುಂದೆ ಮಂಡಿಸಲಾದ ವಿಧೇಯಕವನ್ನು ಮರುದಿನ ಹೆಚ್ಚಿನ ಅಧ್ಯಯನಕ್ಕಾಗಿ ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ಕಳುಹಿಸಲಾಗಿತ್ತು. ಜೆಪಿಸಿಯು ಸುದೀರ್ಘ ಚರ್ಚೆ, ಸಭೆ, ಜನರ ಅಭಿಪ್ರಾಯ ಸಂಗ್ರಹಿಸಿದೆ. ಸಮಿತಿಯು ವರದಿಯನ್ನು ಚಳಿಗಾಲದ ಅಧಿವೇಶನದ ಮೊದಲ ವಾರದ ಕೊನೆಯ ದಿನದಂದು ಸಂಸತ್ತಿಗೆ ಸಲ್ಲಿಸುವಂತೆ ಈಗಾಗಲೇ ಸೂಚಿಸಲಾಗಿದೆ. ಹೀಗಾಗಿ ಜಂಟಿ ಸಂಸದೀಯ ಸಮಿತಿಯು ತನ್ನ ವರದಿಯನ್ನು ನವೆಂಬರ್ 29ರೊಳಗೆ ಸದನದ ಮುಂದೆ ಮಂಡಿಸುವ ಸಾಧ್ಯತೆ ಇದೆ.
ಜೆಪಿಸಿ ಸಭೆ:ಬಳಿಕ ಉಭಯ ಸದನದಲ್ಲಿ ಇದಕ್ಕೆ ಸಂಬಂಧಿಸಿದ ವಿಧೇಯಕವು ಚರ್ಚೆಗೆ ಬಂದು ಮಂಡನೆಯಾಗಲಿದೆ. ಇದಲ್ಲದೇ, ಕಳೆದ ಆಗಸ್ಟ್ನಲ್ಲಿ ಮಂಡಿಸಲಾಗಿದ್ದ ವಿಪತ್ತು ನಿರ್ವಹಣೆ-ತಿದ್ದುಪಡಿ ವಿಧೇಯಕ, ರೈಲ್ವೇ ಮಸೂದೆ ಮತ್ತು ಬ್ಯಾಂಕಿಂಗ್ ಕಾನೂನಿನಂತಹ ವಿಧೇಯಕಗಳು ಮತ್ತೆ ಸದನದಲ್ಲಿ ಮಂಡನೆಗೆ ಬರಲಿವೆ ಎಂದು ಸಚಿವಾಲಯ ತಿಳಿಸಿದೆ.