ನವದೆಹಲಿ:ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕಟ್ಟಿಸಿರುವ ನೂತನ ಭವ್ಯ ಸಂಸತ್ ಭವನದ ಒಂದು ಭಾಗದಲ್ಲಿ ಮಳೆ ನೀರು ಸೋರಿಕೆಯಾಗುತ್ತಿದೆ. ಸಂಸತ್ ಪ್ರವೇಶ ದ್ವಾರದ ಮುಂಭಾಗದ ಮೊಗಸಾಲೆಯ ಮಧ್ಯಭಾಗದಲ್ಲಿ ನೀರು ಜಿನುಗುತ್ತಿದೆ. ಇದರ ವಿಡಿಯೋವನ್ನು ಕಾಂಗ್ರೆಸ್ ಸಂಸದ ಮಾಣಿಕ್ಕಂ ಠಾಗೋರ್ 'ಎಕ್ಸ್' ಖಾತೆಯಲ್ಲಿ ಹಂಚಿಕೊಂಡಿದ್ದು, ಅಧಿವೇಶನವನ್ನು ಮುಂದೂಡಬೇಕು ಎಂದು ನಿರ್ಣಯ ಮಂಡಿಸಿದ್ದಾರೆ.
ಸಂಸತ್ ಪ್ರವೇಶದ ಬಳಿಕ ಬರುವ ದೊಡ್ಡ ಮೊಗಸಾಲೆಯ (ಲಾಬಿ) ಮಧ್ಯಭಾಗದಲ್ಲಿ ನೀರಿನ ಹನಿಗಳು ಬೀಳುತ್ತಿವೆ. ನೀರನ್ನು ಹಿಡಿಯಲು ಪ್ಲಾಸ್ಟಿಕ್ ಬಕೆಟ್ ಇಡಲಾಗಿದೆ. ಸಂಸತ್ ಭವನ ಉದ್ಘಾಟನೆಯಾಗಿ ಒಂದು ವರ್ಷ ಕಳೆಯುವ ಮೊದಲೇ ಸೋರುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
'ಹೊರಗೆ ಪೇಪರ್ ಸೋರಿಕೆ, ಸಂಸತ್ತಿನೊಳಗೆ ನೀರು ಸೋರಿಕೆ. ರಾಷ್ಟ್ರಪತಿಗಳು ಬರುವ ಸಂಸತ್ತಿನ ಮೊಗಸಾಲೆಯಲ್ಲಿ ಮಳೆ ನೀರು ಸೋರುತ್ತಿದೆ. ಹೊಸ ಸಂಸತ್ ಕಟ್ಟಡದಲ್ಲಿ ತುರ್ತು ಹವಾಮಾನ ಎಚ್ಚರಿಕೆ ವಹಿಸಬೇಕಿದೆ. ಕಟ್ಟಡ ಉದ್ಘಾಟನೆಯಾದ ಒಂದು ವರ್ಷದಲ್ಲಿ ಇಂತಹ ಅಪಸವ್ಯ ಕಂಡುಬಂದಿದ್ದು, ಅಧಿವೇಶನ ಮುಂದೂಡುವ ಬಗ್ಗೆ ನಿರ್ಣಯ ಮಂಡಿಸಲಾಗುತ್ತಿದೆ' ಎಂದು ಮಾಣಿಕ್ಕಂ ಠಾಗೋರ್ ಬರೆದುಕೊಂಡಿದ್ದಾರೆ.