ಮುಂಬೈ: ಮಹಾರಾಷ್ಟ್ರದ ಮಹಾಯುತಿ ಸರ್ಕಾರದ ಸಂಪುಟ ವಿಸ್ತರಣೆ ಮಾಡಲಾಗಿದೆ. 39 ಶಾಸಕರು ಸಚಿವರಾಗಿ ಭಾನುವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ನಡುವೆ ತಮಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಅಸಮಾಧಾನಗೊಂಡ ಶಿವಸೇನಾ ಶಾಸಕ ನರೇಂದ್ರ ಭೋಂಡೇಕರ್ ಪಕ್ಷದ ತಮ್ಮ ಎಲ್ಲ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಈ ಕುರಿತು ಮಾತನಾಡಿರುವ ಶಿವಸೇನಾ ಉಪ ನಾಯಕ ಮತ್ತು ಪೂರ್ವ ವಿದರ್ಭ ಜಿಲ್ಲೆಯ ಸಹಯೋಜಕರಾದ ಭೋಂಡೇಕರ್, ಸಚಿವ ಸ್ಥಾನ ನೀಡುವ ಕುರಿತು ಪಕ್ಷದ ನಾಯಕರು ಮತ್ತು ಉಪ ಮುಖ್ಯಮಂತ್ರಿಯಾಗಿರುವ ಏಕನಾಥ್ ಶಿಂಧೆ ಆಶ್ವಾಸನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕ್ಯಾಬಿನೆಟ್ ಸ್ಥಾನವನ್ನು ಪಡೆದು ಅಭಿವೃದ್ಧಿ ಕಾರ್ಯ ನಡೆಸಲು ಆಕಾಂಕ್ಷೆ ಹೊಂದಿದ್ದಾಗಿ ತಿಳಿಸಿದರು.
ಮಾತುಕೊಟ್ಟು ತಪ್ಪಿದ್ದಾರೆ;ಸಚಿವ ಸ್ಥಾನದ ಷರತ್ತಿನ ಮೇಲೆ ನಾನು ಶಿವಸೇನೆ ಸೇರಿದ್ದೆ. ಶಿಂಧೆ ಕೂಡ ಮಂತ್ರಿ ಸ್ಥಾನ ಕೊಡಿಸುವ ಭರವಸೆ ನೀಡಿದ್ದರು. ಹಿಂದಿನ ಸರ್ಕಾರದಲ್ಲಿ ಶಿಂಧೆ ಮುಖ್ಯಮಂತ್ರಿಯಾಗಿದ್ದಾಗ, ನಾನು ಸ್ವತಂತ್ರ ಸಚಿವನಾಗಿದ್ದು, ಶಿಂಧೆ ಅವರನ್ನು ಬೆಂಬಲಿಸಿದ್ದೆ. ಸಂಪುಟ ಸ್ಥಾನದಲ್ಲಿ ನನ್ನ ಹೆಸರು ಕಣ್ಮರೆಯಾಗಿರುವ ಹಿನ್ನೆಲೆಯಲ್ಲಿ ಪಕ್ಷದ ಎಲ್ಲಾ ಸ್ಥಾನಗಳಿಂದಲೂ ಕೆಳಗಿಳಿಯುವ ನಿರ್ಧಾರ ಕೈಗೊಂಡಿದ್ದೇನೆ. ನಾನು ಇದೀಗ ಯಾವುದೇ ಅಧಿಕೃತ ಹುದ್ದೆಗಳನ್ನು ಹೊಂದುವ ಮನಸ್ಥಿತಿಯಲ್ಲಿ ಇಲ್ಲ. ಇದೇ ಕಾರಣದಿಂದ ನಾನು ರಾಜೀನಾಮೆ ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.