ನವದೆಹಲಿ:ಪ್ರಸ್ತಾವಿತ ಒಂದು ದೇಶ, ಒಂದು ಚುನಾವಣೆ ವಿಧೇಯಕವು ಲೋಕಸಭೆಯಲ್ಲಿ ಮಂಡನೆಯಾಯಿತು. ಆದರೆ, ವಿಪಕ್ಷಗಳ ವಿರೋಧದ ಹಿನ್ನೆಲೆಯಲ್ಲಿ ವಿಸ್ತೃತ ಚರ್ಚೆಗಾಗಿ ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಉದ್ದೇಶಿಸಿರುವ ಸಂವಿಧಾನದ 129ನೇ ತಿದ್ದುಪಡಿ ಮಸೂದೆಯನ್ನು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಇಂದು (ಮಂಗಳವಾರ) ಲೋಕಸಭೆಯಲ್ಲಿ ಮಂಡಿಸಿದರು. ವಿಧೇಯಕದ ಮೇಲಿನ ಚರ್ಚೆಯಲ್ಲಿ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದವು.
ಸ್ಪೀಕರ್ ಓಂ ಬಿರ್ಲಾ ಅವರು ವಿಧೇಯಕವನ್ನು ಧ್ವನಿಮತಕ್ಕೆ ಹಾಕಿದರು. ಇದಾದ ಬಳಿಕ ನಿಖರ ಫಲಿತಾಂಶಕ್ಕಾಗಿ ಎಲೆಕ್ಟ್ರಾನಿಕ್ ಮತದಾನ ನಡೆಸಲಾಯಿತು. ಈ ವೇಳೆ ವಿಧೇಯಕದ ಪರವಾಗಿ 269, ವಿರುದ್ಧವಾಗಿ 198 ಮತಗಳು ಬಿದ್ದಿವೆ ಎಂದು ಸ್ಪೀಕರ್ ಪ್ರಕಟಿಸಿದರು.
ಇದನ್ನೂ ಓದಿ: Explained: ಏನಿದು ಒಂದು ದೇಶ, ಒಂದು ಚುನಾವಣೆ? ಇಲ್ಲಿದೆ ವಿಧೇಯಕದ ಒಳಹೊರಗು
ವಿಸ್ತೃತ ಚರ್ಚೆಗಾಗಿ ಜೆಪಿಸಿಗೆ:ಲೋಕಸಭೆಯಲ್ಲಿ ವಿಧೇಯಕವು ಅಂಗೀಕಾರ ಪಡೆದುಕೊಂಡರೂ, ಹಲವು ವಿಚಾರಗಳ ಕುರಿತು ಆಡಳಿತ ಮತ್ತು ವಿಪಕ್ಷಗಳ ನಡುವೆ ವಿರೋಧಾಭಾಸ ಉಂಟಾಯಿತು. ಪ್ರಸ್ತಾವಿತ ವಿಧೇಯಕವನ್ನು ವಿಸ್ತೃತ ಚರ್ಚೆಗಾಗಿ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಗೆ ವಹಿಸಬೇಕು ಎಂದು ವಿಪಕ್ಷಗಳು ಬೇಡಿಕೆ ಇಟ್ಟವು. ಇದಕ್ಕೆ ಕೇಂದ್ರವು ಒಪ್ಪಿಗೆ ಸೂಚಿಸಿತು.
ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು 'ಒಂದು ರಾಷ್ಟ್ರ, ಒಂದು ಚುನಾವಣೆ'ಯ ಸಂವಿಧಾನದ 129ನೇ ತಿದ್ದುಪಡಿ ವಿಧೇಯಕವನ್ನು ಜೆಪಿಸಿಗೆ ನೀಡುವುದಾಗಿ ಸದನಕ್ಕೆ ತಿಳಿಸಿದರು.
ಚರ್ಚೆಗೆ ಸೂಚಿಸಿದ್ದ ಪ್ರಧಾನಿ:ಈ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ ಅವರು, "ಒಂದು ರಾಷ್ಟ್ರ, ಒಂದು ಚುನಾವಣಾ ವಿಧೇಯಕವನ್ನು ಸಚಿವ ಸಂಪುಟದಲ್ಲಿ ಅಂಗೀಕಾರ ಸಿಕ್ಕ ವೇಳೆ, ಅದರ ವಿಸ್ತೃತ ಚರ್ಚೆಗೆ ಜೆಪಿಸಿಗೆ ಕಳುಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರೇ ಸಲಹೆ ನೀಡಿದ್ದರು. ಮಹತ್ವದ ವಿಧೇಯಕವು ಹೆಚ್ಚಿನ ಚರ್ಚೆಗೆ ಒಳಪಡಬೇಕು ಎಂಬುದೂ ಸರ್ಕಾರದ ನಿರ್ಧಾರವಾಗಿದೆ ಎಂದು ತಿಳಿಸಿದ್ದರು.
ಪ್ರಸ್ತಾವಿತ ಒಂದು ದೇಶ, ಒಂದು ಚುನಾವಣೆ ವಿಧೇಯಕವು ಸಂವಿಧಾನದ 129ನೇ ತಿದ್ದುಪಡಿ ಮಸೂದೆಯಾಗಿದ್ದು, ಇದು ದೇಶದಲ್ಲಿ ಏಕಕಾಲಕ್ಕೆ ಎಲ್ಲ ಸಂಸ್ಥೆಗಳಿಗೆ ಚುನಾವಣೆ ನಡೆಸುವ ಮಹತ್ತರ ಉದ್ದೇಶ ಹೊಂದಿದೆ. ಈ ವಿಧೇಯಕದ ಜೊತೆಗೆ, ಜಮ್ಮು-ಕಾಶ್ಮೀರ ಮತ್ತು ದೆಹಲಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಧಾನಸಭೆ ಜೊತೆಗೆ, ಲೋಕಸಭೆ ಚುನಾವಣೆ ನಡೆಸಲು ಪ್ರಸ್ತಾವಿತ ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ಮಸೂದೆ- 2024 ಮಂಡನೆಯಾಗಲಿದೆ.
ಈ ವಿಧೇಯಕಗಳು ಏನನ್ನು ಪ್ರಸ್ತಾಪಿಸುತ್ತದೆ?ಸಂವಿಧಾನದ 129ನೇ ತಿದ್ದುಪಡಿ ಮಸೂದೆಯು ಸಂವಿಧಾನದಲ್ಲಿ ಹೊಸ ವಿಧಿ 82ಎ ಅನ್ನು ಸೇರಿಸಲು ಪ್ರಸ್ತಾಪಿಸುತ್ತದೆ. ಇದು, ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಅವಕಾಶ ಕಲ್ಪಿಸುತ್ತದೆ. ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆ ಅಧಿಕಾರಾವಧಿಯನ್ನು ನಿರ್ಧರಿಸಲು ಕಲಂ 83 ಮತ್ತು 172 ನೇ ವಿಧಿಗಳನ್ನು ತಿದ್ದುಪಡಿ ಮಾಡಲು ಅವಕಾಶ ನೀಡುತ್ತದೆ.
ಇದನ್ನೂ ಓದಿ:ಲೋಕಸಭೆಯಲ್ಲಿ 'ಒಂದು ದೇಶ, ಒಂದು ಚುನಾವಣೆ' ವಿಧೇಯಕ ಮಂಡಿಸಿದ ಕೇಂದ್ರ ಸರ್ಕಾರ