ಹಜಾರಿಬಾಗ್ (ಜಾರ್ಖಂಡ್):ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯಡಿ ಭಾರತದಲ್ಲಿರುವ ನಾಗರಿಕರ ಪಟ್ಟಿಯನ್ನು ಸಿದ್ಧಪಡಿಸುವುದು ನಮ್ಮ ಮೊದಲ ಆದ್ಯತೆ ಎಂದು ಅಸ್ಸೋಂ ಮುಖ್ಯಮಂತ್ರಿ ಮತ್ತು ಜಾರ್ಖಂಡ್ ಸಹ-ಚುನಾವಣಾ ಉಸ್ತುವಾರಿ ಹಿಮಂತ ಬಿಸ್ವಾ ಶರ್ಮಾ ಪುನರುಚ್ಛರಿಸಿಹದ್ದಾರೆ.
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ಜಾರ್ಖಂಡ್ಗೆ ಭೇಟಿ ನೀಡಿದ್ದು, ಇಲ್ಲಿನ ಜನಸಂಖ್ಯಾ ಬದಲಾವಣೆಗಳ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾಗರಿಕರ ರಾಷ್ಟ್ರೀಯ ನೋಂದಣಿ ಜಾರಿ ಮಾಡಲಾಗುತ್ತದೆ. ಅದರಲ್ಲಿ ತಮ್ಮ ಭಾರತೀಯ ಪೌರತ್ವವನ್ನು ಸಾಬೀತುಪಡಿಸಲು ಸಾಧ್ಯವಾಗದಿದ್ದರೆ, ಕಾನೂನು ಮೂಲಕ ಅಂತವರನ್ನು ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗುತ್ತದೆ. ಆದರೆ, ಅದಕ್ಕೂ ಮುನ್ನ ಎಲ್ಲರಿಗೂ ಅವರ ಹಕ್ಕುಗಳನ್ನು ಸಾಬೀತುಪಡಿಸಲು ಅವಕಾಶ ನೀಡಲಾಗುತ್ತದೆ. ಇದನ್ನು ಜಾರಿಗೆ ತರುವುದು ನಮ್ಮ ಕರ್ತವ್ಯ. ಎನ್‌ಆರ್‌ಸಿಯಲ್ಲಿ ಹೆಸರಿಲ್ಲದವರನ್ನು ಬಾಂಗ್ಲಾದೇಶಕ್ಕೆ ಕಳಿಸಿಕೊಡಲಾಗುತ್ತದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್‌ನಲ್ಲಿ ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಸಹ ಅವರು ಹೇಳಿದರು.
ಅಸ್ಸೋಂನಲ್ಲಿ ನಮ್ಮ ಎನ್‌ಆರ್‌ಸಿಯ ಮೊದಲ ಹಂತ ಪೂರ್ಣಗೊಂಡಿದೆ. ಈಗಾಗಲೇ 1.4 ಮಿಲಿಯನ್ ಜನರನ್ನು ಗುರುತಿಸಲಾಗಿದೆ. ಈಗ ಸುಪ್ರೀಂ ಕೋರ್ಟ್‌ನಲ್ಲಿ ಮರು ಪರಿಷ್ಕರಣೆಗೆ ಅರ್ಜಿ ಸಲ್ಲಿಸಿದ್ದೇವೆ. ಮೊದಲ ಹಂತದಲ್ಲಿ, ನಾವು ಮೊದಲ ನೋಟದಲ್ಲೇ ಭಾರತೀಯ ಪ್ರಜೆಗಳಲ್ಲದ 1.4 ಮಿಲಿಯನ್ ಜನರನ್ನು ಗುರುತಿಸಿದ್ದೇವೆ. ಸುಪ್ರೀಂ ಕೋರ್ಟ್ ಮರು ಪರಿಷ್ಕರಣೆಗೆ ಅನುಮತಿ ನೀಡಿದರೆ, ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದರು.